ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಬಿಡುಗಡೆ ಮಾಡಿದ್ದಾರೆ. ಗುಜರಾತ್ನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಈ ನೀತಿ ಪ್ರಕಟಿಸಿದ್ದಾರೆ.
ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಯಾವುದೇ ದೇಶದ ಆರ್ಥಿಕತೆಯಲ್ಲಿ ಚಲನಶೀಲತೆ ದೊಡ್ಡ ಪಾತ್ರ ವಹಿಸುತ್ತದೆ. ಹೊಸ ಸ್ಕ್ರ್ಯಾಪೇಜ್ ಪಾಲಿಸಿ ಆರ್ಥಿಕತೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಪುನರ್ಬಳಕೆ, ರಿ-ಸೈಕಲ್ ಈ ನೀತಿಯ ಪ್ರಮುಖ ಉದ್ದೇಶ. ಈ ನೀತಿಯು ದೇಶದಲ್ಲಿ 10,000 ಕೋಟಿ ರೂಪಾಯಿಗಳ ಹೂಡಿಕೆ ಆಕರ್ಷಿಸಲಿದೆ. ಹೆದ್ದಾರಿ ನಿರ್ಮಾಣದಲ್ಲಿ ಭಾರತ ತ್ಯಾಜ್ಯ ಉತ್ಪನ್ನ ಬಳಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಉಪಸ್ಥಿತರಿದ್ದರು.
ಈ ನೀತಿಯನ್ನು ಪ್ರಚಲಿತಗೊಳಿಸಲು ಸರ್ಕಾರ ಇದರಡಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಉದಾಹರಣೆಗೆ ಹಳೆ ಕಾರನ್ನು ಸ್ಕ್ರ್ಯಾಪ್‌ಗೆ ನೀಡುವ ಮಾಲೀಕರಿಗೆ ಒಂದು ಸರ್ಟಿಫಿಕೇಟ್ ನೀಡಲಾಗುವುದು. ಹೊಸ ಕಾರು ಖರೀದಿಯ ವೇಳೆ ಅವರು ಈ ಸರ್ಟಿಫಿಕೇಟ್ ಅನ್ನು ತೋರಿಸುವ ಮೂಲಕ ನೋಂದಣಿ ಶುಲ್ಕದಿಂದ ಮುಕ್ತಿ ಪಡೆಯಬಹುದು.
ಈ ಪಾಲಿಸಿಯ ಕುರಿತು ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈ ನೀತಿಯು ಕಚ್ಚಾ ವಸ್ತುಗಳ ಬೆಲೆಯನ್ನು ಶೇಕಡಾ 40 ರಷ್ಟು ಕಡಿಮೆ ಮಾಡುತ್ತದೆ. ಶೇಕಡಾ 99 ರಷ್ಟು ಲೋಹದ ತ್ಯಾಜ್ಯ ರಿಕವರಿ ಮಾಡಿಕೊಳ್ಳಬಹುದು. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಸ್ಪರ್ಧಾತ್ಮಕತೆ ಹೆಚ್ಚುತ್ತದೆ ಎಂದು ಮಾಹಿತಿ ನೀಡಿದರು.
ಈ ಪಾಲಿಸಿಯು ದೇಶದಲ್ಲಿ ವಾಹನಗಳ ಮಾರಾಟ ಹೆಚ್ಚಿಸುವುದರೊಂದಿಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವ ಮೂಲವಾಗಿದೆ. ಅಂದಾಜಿನ ಪ್ರಕಾರ, ಆಟೋಮೊಬೈಲ್ ಮಾರಾಟ ಹೆಚ್ಚಾದಂತೆ, ಸರ್ಕಾರಗಳು ಸರಕು ಮತ್ತು ಸೇವಾ ತೆರಿಗೆಯಲ್ಲಿ ಹೆಚ್ಚುವರಿಯಾಗಿ 30,000-40,000 ಕೋಟಿ ರೂ. ಲಾಭ ಪಡೆಯಬಹುದು ಎಂದು ಹೇಳಿದರು.
ಪ್ರಸ್ತುತ ಈ ನೀತಿ ಕಡ್ಡಾಯವಾಗಿಲ್ಲ
ಬಜೆಟ್ ಮಂಡನೆಯ ಬಳಿಕ ಈ ನೀತಿಯ ಕುರಿತು ಲೋಕಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಹೊಸ ಸ್ಕ್ರ್ಯಾಪ್ಪೇಜ್ ನೀತಿ ಸ್ವಯಂಪ್ರೇರಿತವಾಗಿದೆ ಎಂದಿದ್ದಾರೆ. ಇದರರ್ಥ ನಿಮ್ಮ ಕಾರ್ ಪಾಲಿಸಿಯ ಅಡಿ ನೀವು ಅದನ್ನು ಸ್ಕ್ರ್ಯಾಪ್‌ಗೆ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನೀವೇ ನಿರ್ಧರಿಸಬೇಕು. ಈ ನೀತಿಯ ಪ್ರಕಾರ, ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ನಿಗದಿತ ಸಮಯದಲ್ಲಿ ಕಡ್ಡಾಯಗೊಳಿಸಲಾಗಿದೆ.