ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿ ನಮಾಮಿ ಗಂಗೆ ಮಿಷನ್ ಅಡಿಯಲ್ಲಿ ಆರು ಬೃಹತ್ ಯೋಜನೆಗಳನ್ನು ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
68 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ, ಹರಿದ್ವಾರದ ಜಗ್ಜೀತ್‌ಪುರದಲ್ಲಿ ಅಸ್ತಿತ್ವದಲ್ಲಿರುವ 27 ಎಂಎಲ್‌ಡಿ ಎಸ್‌ಟಿಪಿ ಮೇಲ್ದರ್ಜೆ ಮತ್ತು ಹರಿದ್ವಾರದ ಸರಾಯ್ನಲ್ಲಿ 18 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ ಯೋಜನೆಗಳಲ್ಲಿ ಸೇರಿವೆ. ಹೈಬ್ರಿಡ್ ಪಿಪಿಪಿ ಮಾದರಿಯಲ್ಲಿ ಪೂರ್ಣಗೊಂಡಿರುವ ಜಗ್ಜೀತ್‌ಪುರದ ಮೊದಲ ಒಳಚರಂಡಿ ಯೋಜನೆಯ 68 ಎಂಎಲ್‌ಡಿ ಎಸ್‌ಟಿಪಿ ಉದ್ಘಾಟನೆಯನ್ನೂ ಪ್ರಧಾನಿ ನೆರವೇರಿಸಲಿದ್ದಾರೆ.
ಹೃಷಿಕೇಶದ ಲಕ್ಕಡ್ ಘಾಟ್‌ನಲ್ಲಿ 26 ಎಂಎಲ್‌ಡಿ ಎಸ್‌ಟಿಪಿ ಉದ್ಘಾಟಿಸಲಾಗುವುದು. ಹರಿದ್ವಾರ-ಹೃಷಿಕೇಶ ವಲಯವು ಗಂಗಾ ನದಿಗೆ ಸುಮಾರು ಶೇ 80ರಷ್ಟು ತ್ಯಾಜ್ಯ ನೀರಿನ್ನು ಸೇರಿಸುತ್ತದೆ. ಆದ್ದರಿಂದ, ಈ ಎಸ್‌ಟಿಪಿಗಳ ಉದ್ಘಾಟನೆಯು ಗಂಗಾ ನದಿಯ ಸ್ವಚ್ಛತಾ ಯೋಜನೆಯಲ್ಲಿ ಮಹತ್ವದ್ದಾಗಿದೆ.
ಮುನಿ ಕಿ ರೇತಿ ಪಟ್ಟಣದಲ್ಲಿ ಚಂದ್ರೇಶ್ವರ ನಗರದ 7.5 ಎಂಎಲ್‌ಡಿ ಎಸ್‌ಟಿಪಿ ದೇಶದ ಮೊದಲ 4 ಅಂತಸ್ತಿನ ಒಳಚರಂಡಿ ಸಂಸ್ಕರಣಾ ಘಟಕವಾಗಲಿದ್ದು, ಅಲ್ಲಿ ಭೂ ಲಭ್ಯತೆಗಿದ್ದ ಮಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಲಾಗಿದೆ. ಎಸ್‌ಟಿಪಿಯನ್ನು 900 ಎಸ್‌ಕ್ಯೂಎಂಗಿಂತ ಕಡಿಮೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ಅಷ್ಟು ಸಾಮರ್ಥ್ಯದ ಎಸ್‌ಟಿಪಿಗಳಿಗೆ ಬೇಕಾಗುವ ಪ್ರದೇಶದ ಶೇ 30ರಷ್ಟು ಮಾತ್ರ ಆಗಿದೆ.
ಚೋರ್ಪಾನಿಯಲ್ಲಿ 5 ಎಂಎಲ್‌ಡಿ ಎಸ್‌ಟಿಪಿ ಮತ್ತು ಬದರಿನಾಥ್‌ನಲ್ಲಿ 1 ಎಂಎಲ್‌ಡಿ ಮತ್ತು 0.01 ಎಮ್‌ಎಲ್‌ಡಿ ಸಾಮರ್ಥ್ಯ ಹೊಂದಿರುವ ಎರಡು ಎಸ್‌ಟಿಪಿಗಳನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಗಂಗಾ ನದಿಗೆ ಸಮೀಪವಿರುವ 17 ಪಟ್ಟಣಗಳಿಂದ ಮಾಲಿನ್ಯವನ್ನು ತಡೆಗಟ್ಟಲು ಉತ್ತರಾಖಂಡದಲ್ಲಿ ಎಲ್ಲಾ 30 ಯೋಜನೆಗಳು ಈಗ ಪೂರ್ಣಗೊಂಡಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ.
ಗಂಗಾ ನದಿಯ ಪುನಶ್ಚೇತನಕ್ಕಾಗಿ ಮಾಡಿರುವ ಕಾಮಗಾರಿಗಳು, ಸಂಸ್ಕೃತಿ, ಜೀವವೈವಿಧ್ಯತೆಗಳನ್ನು ಪ್ರದರ್ಶಿಸಲು ರೂಪಿಸುವ ಗಂಗಾ ನದಿಯ ಮೊದಲ ವಸ್ತುಸಂಗ್ರಹಾಲಯ 'ಗಂಗಾ ಅವಲೋಕನ'ವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ವಸ್ತುಸಂಗ್ರಹಾಲಯವು ಹರಿದ್ವಾರದ ಚಾಂಡಿ ಘಾಟ್‌ನಲ್ಲಿದೆ.
ಸ್ವಚ್ಛ ಗಂಗೆಗಾಗಿ ರಾಷ್ಟ್ರೀಯ ಅಭಿಯಾನ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಪ್ರಕಟಿಸಿರುವ ‘ರೋಯಿಂಗ್ ಡೌನ್ ದಿ ಗಂಗಾ’ ಪುಸ್ತಕವನ್ನು ಈ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಈ ವರ್ಣರಂಜಿತ ಪುಸ್ತಕವು ಗಂಗಾ ನದಿಯ ಜೀವವೈವಿಧ್ಯತೆ ಮತ್ತು ಸಂಸ್ಕೃತಿಯ ಮಿಳಿತವಾಗಿದೆ. ಈ ಪುಸ್ತಕವು ಗಂಗಾ ನದಿಯ ಕಥೆಯನ್ನು ಅದರ ಮೂಲವಾದ ಗೋಮಖದಿಂದ ಸಮುದ್ರ ಸೇರುವ ಗಂಗಾ ಸಾಗರದವರೆಗೆ ನದಿಯಲ್ಲಿ ಸಂಚರಿಸಿದರೆ ಆಗುವ ಅನುಭವವನ್ನು ಕಟ್ಟಿಕೊಡುತ್ತದೆ.
ಜಲ ಜೀವನ್ ಮಿಷನ್ ಲೋಗೋ ಮತ್ತು ‘ಗ್ರಾಮ ಪಂಚಾಯತಿಗಳಿಗೆ ಮಾರ್ಗದರ್ಶಿಕೆ ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ಪಾನಿ ಸಮಿತಿಗಳು’ಇವುಗಳನ್ನೂ ಪ್ರಧಾನಿ ಅನಾವರಣಗೊಳಿಸಲಿದ್ದಾರೆ.