ನವದೆಹಲಿ: ದೇಶೀಯ ಉತ್ಪಾದನೆ ಉತ್ತೇಜಿಸಲು ಕೇಂದ್ರ ಸರ್ಕಾರ ವಿಶೇಷ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ (ಪಿಎಲ್ಐ) ಘೋಷಿಸಿದೆ.
ಇತ್ತೀಚಿನ ಅಧ್ಯಯನದ ವರದಿ ಪ್ರಕಾರ, ಪಿಎಲ್ಐ ಘೋಷಣೆಯ ಅನುಷ್ಠಾನವು ಆದಾಯದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಬಹುದು. ಮುಂದಿನ ಐದು ವರ್ಷಗಳಲ್ಲಿ ಸುಮಾರು 14 ವಲಯಗಳು ಹೆಚ್ಚುವರಿಯಾಗಿ 35-40 ಲಕ್ಷ ಕೋಟಿ ರೂ. ಆದಾಯ ತಂದುಕೊಡಬಹುದು.
ಸಾಂಕ್ರಾಮಿಕ ಸಂಕಷ್ಟದ ಸಮಯದಲ್ಲಿ ಚೀನಾ ತೊರೆದ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರವು ವಿಶೇಷ ಪಿಎಲ್ಐಗಳನ್ನು ಪ್ರಾರಂಭಿಸಿದೆ. ಸುಮಾರು 1.8 ಲಕ್ಷ ಕೋಟಿ ರೂ. ಮೌಲ್ಯದ ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ಘೋಷಿಸಲಾಗಿದೆ.
ಇದನ್ನೂ ಓದಿ: ಏಪ್ರಿಲ್-ಜೂನ್‌ನಲ್ಲಿ ನೇಮಕಾತಿ ಚುರುಕಿನಿಂದ ಶುರು: ಈಗಲೇ ರೆಸ್ಯೂಮ್ ಸಿದ್ಧಪಡಿಸಿ!
ಪಿಎಲ್ಐ ಒದಗಿಸಿದ ಬೆಂಬಲದೊಂದಿಗೆ ಮುಂದಿನ 24-30 ತಿಂಗಳಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ. ಬಂಡವಾಳ ವೆಚ್ಚ ಸುಮಾರು 2-2.7 ಲಕ್ಷ ಕೋಟಿ ರೂ.ಯಷ್ಟಿರಲಿದೆ. ಐಟಿ ಹಾರ್ಡ್‌ವೇರ್, ಟೆಲಿಕಾಂ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನ್‌ಗಳಂತಹ ಕ್ಷೇತ್ರಗಳಲ್ಲಿ ದೇಶೀಯ ಉತ್ಪಾದನೆ ದುರ್ಬಲವಾಗಿತ್ತು. ಇತ್ತೀಚಿನ ಪಿಎಲ್‌ಐಗಳಿಂದಾಗಿ ಈ ಕ್ಷೇತ್ರಗಳಲ್ಲಿನ ಬಂಡವಾಳ ವೆಚ್ಚವು ಶೇ 3.5ರಷ್ಟು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಕೈಗಾರಿಕಾ ಹೂಡಿಕೆಯ ಬಂಡವಾಳ ವೆಚ್ಚದ ಪಾಲು 2022ರ ವೇಳೆಗೆ ಶೇ 45-50ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಶೇ 35ರಷ್ಟು ಕುಗ್ಗಿದೆ ಎಂದು ತಿಳಿದುಬಂದಿದೆ. ಬ್ಯಾಂಕ್ ಸಾಲಗಳ ಬೇಡಿಕೆಯೂ ಹೆಚ್ಚಾಗುತ್ತದೆ. ಈ ಬೆಳವಣಿಗೆಗಳು ಆರ್ಥಿಕತೆಗೆ ವರದಾನವಾಗಲಿದೆ ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.