ನವದೆಹಲಿ/ ಬೆಂಗಳೂರು: ಸ್ವಿಟ್ಜರ್ಲ್ಯಾಂಡ್ನ ದಾವೊಸ್ನಲ್ಲಿ ಜನವರಿ 20ರಿಂದ 24ರವರೆಗೆ ನಡೆಯಲಿರುವ ಜಾಗತಿಕ ಮಟ್ಟದ ವಿಶ್ವ ಆರ್ಥಿಕ ಶೃಂಗಸಭೆಗೆ (ಡಬ್ಲ್ಯುಇಎಫ್) ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಭಾರತೀಯ ನಿಯೋಗದ ಮುಂದಾಳತ್ವ ವಹಿಸಲಿದ್ದಾರೆ.
50ನೇ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ನಾನಾ ರಾಷ್ಟ್ರಗಳ ಉದ್ಯಮಿಗಳು, ಸರ್ಕಾರಗಳ ಪ್ರತಿನಿಧಿಗಳು, ಹೂಡಿಕೆದಾರರು, ಆರ್ಥಿಕ ತಜ್ಞರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಗೋಯಲ್ ಜೊತೆಗೆ ಇತರೆ ಸಚಿವರು ತೆರಳಲಿದ್ದಾರೆ.
ಕೇಂದ್ರ ಸಚಿವ ಗೋಯಲ್ ಅವರು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ರಷ್ಯಾ, ಸೌದಿ ಅರೇಬಿಯಾ, ಸ್ವಿಟ್ಜರ್ಲ್ಯಾಂಡ್, ಕೊರಿಯಾ ಮತ್ತು ಸಿಂಗಾಪುರ ಸಚಿವರುಗಳನ್ನು ಭೇಟಿ ಮಾಡಿ ವ್ಯಾಪಾರ ಸಂಬಂಧಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವಿಶ್ವ ವಾಣಿಜ್ಯ ಒಕ್ಕೂಟದ (ಡಬ್ಲ್ಯುಟಿಒ) ನಿರ್ದೇಶಕ ಮತ್ತು ಅಂತರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ) ಜನರ್ ಸೆಕ್ರೆಟರಿ ಅವರನ್ನು ಭೇಟಿ ಮಾಡಲಿದ್ದಾರೆ.
ಗೋಯಲ್ ವಿವಿಧ ಕಂಪನಿಗಳ ಸಿಇಒಗಳ ಜೊತೆಗೆ ಹೂಡಿಕೆ ವಿಷಯವಾಗಿ ಚರ್ಚಿಸಲಿದ್ದಾರೆ. ಡಬ್ಲ್ಯುಇಎಫ್ನ ಸಂವಾದ ಹಾಗೂ ದುಂಡು ಮೇಜಿನ ಸಭೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಹೂಡಿಕೆ ಹಾಗೂ ಭಾರತದಲ್ಲಿ ಹೂಡಿಕೆ ಮಾಡುವಂತೆ ಜಾಗತಿಕ ಕಂಪನಿಗಳನ್ನು ಆಹ್ವಾನಿಸಲಿದ್ದಾರೆ.
ದಾವೊಸ್ನಲ್ಲಿ ಬಿಎಸ್ವೈ ಭಾಗಿ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಯೋಗ ಸಹ ದಾವೊಸ್ಗೆ ತೆರಳಲಿದ್ದು, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ 40ಕ್ಕೂ ಅಧಿಕ ಜಾಗತಿಕ ಮಟ್ಟದ ಕಂಪನಿಗಳ ಮುಖ್ಯಸ್ಥರ ಜೊತೆಗೆ ಚರ್ಚಿಸಲಿದ್ದಾರೆ. ಅವರೊಂದಿಗೆ ಸಿಎಂ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್, ಡಸಾಲ್ಟ್ ಸಿಸ್ಟಮ್ಸ್, ಎಚ್ಪಿ, ಎಸ್ಎಪಿ, ಮಿತ್ಸುಬಿಷಿ, ಜಿಇ, ನೋವಾ ನೊರ್ಡಿಸ್ಕ್, ಡೆನ್ಸೊ ಸೇರಿದಂತೆ ಹಲವು ಕಂಪನಿಗಳ ಮುಖ್ಯಸ್ಥರೊಂದಿಗೆ ವ್ಯಾವಹಾರಿಕ ಮಾತುಕತೆ ನಡೆಯಲಿದೆ.