ಸ್ಯಾನ್ ಫ್ರಾನ್ಸಿಸ್ಕೊ : ಸ್ಪೇಸ್ ಎಕ್ಸ್ ಸಂಸ್ಥಾಪಕ, ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ಮೈಕ್ರೋಸಾಫ್ಟ್ ಸಹ - ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದಲ್ಲಿ ಮೊದಲ ಬಾರಿಗೆ 127.9 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 127.7 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಬಿಲ್ ಗೇಟ್ಸ್ ಅವರನ್ನು ಎಲೋನ್ ಮಸ್ಕ್ ಹಿಂದಿಕ್ಕಿದ್ದಾರೆ. ಜನವರಿ 2020 ರಿಂದ ಮಸ್ಕ್ ಅವರ ನಿವ್ವಳ ಮೌಲ್ಯದಲ್ಲಿ100 ಬಿಲಿಯನ್ ಡಾಲರ್ ಹೆಚ್ಚಾಗಿದ್ದು, ವಿಶ್ವದ 500 ಶ್ರೀಮಂತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾದ ಷೇರುಗಳು ಗಗನಕ್ಕೇರಿದ ಪರಿಣಾಮ ಮಾರುಕಟ್ಟೆ ಮೌಲ್ಯ 500 ಬಿಲಿಯನ್ ಡಾಲರ್ ತಲುಪಿದೆ. ಹೀಗಾಗಿ ಮಸ್ಕ್ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಆದರೆ, ಮಸ್ಕ್ ಮತ್ತು ಗೇಟ್ಸ್ ನಡುವಿನ ಸಂಪತ್ತಿನ ಅಂತರ ಬಹಳ ಕಡಿಮೆಯಿದ್ದು, ಗೇಟ್ಸ್ ಮತ್ತೆ ಮೇಲಕ್ಕೇರುವ ಸಾಧ್ಯತೆಯಿದೆ.
ಇದನ್ನೂ ಓದಿ:ಆರನೇ ದಿನ ಸ್ವಲ್ಪ ಚೇತರಿಕೆಯಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ಪ್ರಮಾಣ
ಬಿಲ್ ಗೇಟ್ಸ್ ಅವರ ಪ್ರಸ್ತುತ ನಿವ್ವಳ ಮೌಲ್ಯವು 127.7 ಬಿಲಿಯನ್ ಡಾಲರ್ ಇದೆ. ಗೇಟ್ಸ್ ದೊಡ್ಡ ಮೊತ್ತದ ದೇಣಿಗೆ ನೀಡದಿರತ್ತಿದ್ದರೆ ಮೊದಲ ಸ್ಥಾನದಲ್ಲಿರುತ್ತಿದ್ದರು. 2006 ರಿಂದ ಇದುವರೆಗೆ ಬರೋಬ್ಬರಿ 27 ಬಿಲಿಯನ್ ಡಾಲರ್ ಮೊತ್ತವನ್ನು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಮೂಲಕ ಅವರು ದೇಣಿಗೆ ನೀಡಿದ್ದಾರೆ.
ಅಮೆಜಾನ್ ಸಿಇಒ ಜೆಫ್ ಬೆಜೋಸ್ ಹಿಂದಿಕ್ಕುವವರೆಗೆ, ಅಂದರೆ 2017 ರವರೆಗೆ ನಾಲ್ಕು ವರ್ಷಗಳ ಕಾಲ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಬಳಿಕ 182 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಮೂಲಕ ಬೆಜೋಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.