ನವದೆಹಲಿ: ಜಾಗತಿಕ ಕಚ್ಚಾ ತೈಲ ಬೆಲೆಗಳ ಇಳಿಕೆ, ವಾಹನ ಮಾಲೀಕರಿಗೆ ಚಿಲ್ಲರೆ ಇಂಧನ ಬೆಲೆ ಕಡಿಮೆ ಆಗುವಲ್ಲಿ ನೆರವಾಗಲಿಲ್ಲ. ಆದರೆ, ಅಡುಗೆ ಅನಿಲ ಸಿಲಿಂಡರ್‌ಗೆ ಸಹಾಯಧನವನ್ನು ಫಲಾನುಭವಿಗಳ ಖಾತೆಗೆ ಪಾವತಿಸುವ ಸರ್ಕಾರದ ಹಣವನ್ನು ಉಳಿಸಿದೆ.
ನೇರ ಲಾಭ ವರ್ಗಾವಣೆ ಯೋಜನೆಯಡಿ ಎಲ್ಲಾ ಮಹಾನಗರಗಳಲ್ಲಿನ ಎಲ್‌ಪಿಜಿ ಗ್ರಾಹಕರ ಖಾತೆಗಳಿಗೆ ಮೇ ತಿಂಗಳಿನಿಂದ ಸರ್ಕಾರ ಸಹಾಯಧನ ನೀಡುವುದಿಲ್ಲ. ಸಬ್ಸಿಡಿಯು ಇತರ ನಗರಗಳಲ್ಲಿ ಕೇವಲ 2-5 ರೂ.ಗೆ ಸೀಮಿತವಾಗಲಿದ್ದು, ಸಾರಿಗೆ ವೆಚ್ಚ ಹೆಚ್ಚಾಗಿದ್ದು 8 ಕೋಟಿ ಉಜ್ವಲ್ ಫಲಾನುಭವಿಗಳಿಗೆ ಕೇವಲ 20 ರೂ. ಇರಲಿದೆ.
ಎಲ್ಲ ಗ್ರಾಹಕರು 14.2 ಕೆಜಿ ಸಿಲಿಂಡರ್‌ಗೆ ಮುಂಗಡವಾಗಿ ಮಾರುಕಟ್ಟೆ ಬೆಲೆ ಪಾವತಿಸಬೇಕಾಗುತ್ತದೆ. ಸರ್ಕಾರ ಸಬ್ಸಿಡಿಯನ್ನು ನೇರವಾಗಿ ಅರ್ಹ ಗ್ರಾಹಕರ ಖಾತೆಗೆ ವರ್ಗಾಯಿಸುತ್ತದೆ.
ಮಾರ್ಚ್ ಮಧ್ಯದಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ತೀವ್ರ ಕುಸಿತಕ್ಕೆ ಒಳಗಾಯಿತು. ಕಚ್ಚಾ ಬೆಲೆಗಳು ಬ್ಯಾರೆಲ್‌ಗೆ 35 ಡಾಲರ್ನಿಂದ 20 ಡಾಲರ್ಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಏರಿಳಿತ ಕಂಡವು. ಇದರ ಜೊತೆಗೆ ಎಲ್‌ಪಿಜಿ ಬೆಲೆ ಸೇರಿದಂತೆ ತೈಲ ಉತ್ಪನ್ನದ ಬೆಲೆಗಳು ತೀವ್ರವಾಗಿ ಕುಸಿದಿದೆ. ಮೇ 1ರಿಂದ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದಾಖಲೆಯ 744 ರೂ ಇದ್ದದ್ದು 162.50 ರೂ.ಗಳಷ್ಟು ಕಡಿಮೆ ಆಗಿ 581.50 ರೂ.ಗೆ ಇಳಿಕೆಯಾಗಿದೆ.
ಅಡುಗೆ ಅನಿಲದ ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಸರ್ಕಾರವು ಮನೆಗಳಿಗೆ ಯಾವುದೇ ಸಬ್ಸಿಡಿ ಪಾವತಿಸಬೇಕಾಗಿಲ್ಲ. ಉಜ್ವಲ್ ಗ್ರಾಹಕರಿಗೆ ಕನಿಷ್ಠ ಸಬ್ಸಿಡಿ ಮಾತ್ರ ಪಾವತಿಸಬಹುದು. ಬೆಲೆ ಪ್ರವೃತ್ತಿ ಮುಂದುವರಿದರೆ ಸರ್ಕಾರವು 2021ರ ಹಣಕಾಸು ವರ್ಷದಲ್ಲಿ ತೈಲ ಸಬ್ಸಿಡಿ ಮಸೂದೆ ಸಂಪೂರ್ಣವಾಗಿ ತೆಗೆದುಹಾಕಬಹುದು. ಕೋವಿಡ್ -19 ಸಂಬಂಧಿತ ಪರಿಹಾರ ಕ್ರಮಗಳಿಗಾಗಿ ಹೆಚ್ಚುವರಿ ಖರ್ಚು ಮಾಡುತ್ತಿದೆ. ಹೀಗಾಗಿ, ಇದು ಸರ್ಕಾರಕ್ಕೆ ಅನಿವಾರ್ಯ ಆಗಬಹುದು ಎಂದು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ತೈಲ ಸಂಸ್ಕರಣಾ ಮತ್ತು ಚಿಲ್ಲರೆ ವ್ಯಾಪಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
2020-21ರಲ್ಲಿ ಎಲ್‌ಪಿಜಿ ಸಬ್ಸಿಡಿಗೆ ಬಜೆಟ್‌ನಲ್ಲಿ 37,256.21 ಕೋಟಿ ರೂ. ನಿಗದಿಪಡಿಸಲಾಗಿದ್ದು, 2019-20ನೇ ಸಾಲಿನಲ್ಲಿ 34,085.86 ಕೋಟಿ ರೂ.ಗಿಂತ ಶೇ 9ರಷ್ಟು ಅಧಿಕ ಹಣ ಮೀಸಲಿಟ್ಟಿದೆ. ಸೀಮೆಎಣ್ಣೆ ಬೆಲೆಯೂ ಕಡಿಮೆ ಇದ್ದು, ಕೇಂದ್ರವು ರಾಜ್ಯಗಳಿಗೆ ನೀಡುತ್ತಿರುವ ಹಂಚಿಕೆ ಕಡಿಮೆಗೊಳಿಸುತ್ತಿರುವುದರಿಂದ ಈ ವರ್ಷ ತೈಲ ಸಬ್ಸಿಡಿ ಸಂಪೂರ್ಣವಾಗಿ ತೆಗೆದುಹಾಕುವ ಬಗ್ಗೆ ಗಮನಹರಿಸಬಹುದು.