ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ದೇಶಾದ್ಯಂತ ಜಾರಿಗೆ ತರಲಾದ ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ.
ಔಷಧ, ಮದ್ಯ ಮಾರಾಟ, ವಾಹನ, ಎಲೆಕ್ಟ್ರಾನಿಕ್ ಸರಕು ಮತ್ತು ಬಟ್ಟೆಗಳವರೆಗಿನ ಕಂಪನಿಗಳು ಅಗತ್ಯವಿರುವ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ.
ರೈಲ್ವೆ:
ಸುಮಾರು ಎರಡು ತಿಂಗಳ ನಂತರ ಭಾರತೀಯ ರೈಲ್ವೆ ಮಂಗಳವಾರದಿಂದ ಪ್ರಯಾಣಿಕರ ರೈಲು ಕಾರ್ಯಾಚರಣೆ ಪುನರಾರಂಭಿಸಿದೆ. ದೆಹಲಿಯಿಂದ ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ ಮತ್ತು ಇತರ ಮೆಟ್ರೋ ನಗರಗಳಿಗೆ ಸಂಪರ್ಕಿಸಲು ನಿತ್ಯ 15 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ. ಸೋಮವಾರ ಸಂಜೆಯಿಂದ ಐಆರ್ಸಿಟಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಆಟೋ ಮೊಬೈಲ್:
ಮಾರುತಿ ಸುಜುಕಿ ಇಂಡಿಯಾ, ಹ್ಯುಂಡೈ, ಹೀರೋ ಮೊಟೊಕಾರ್ಪ್, ಮರ್ಸಿಡಿಸ್ ಬೆಂಜ್, ಟಿವಿಎಸ್ ಮೋಟಾರ್, ರಾಯಲ್ ಎನ್‌ಫೀಲ್ಡ್ ಸೇರಿದಂತೆ ಇತರೆ ಉತ್ಪಾದನಾ ಚಟುವಟಿಕೆಗಳನ್ನು ಆಯಾ ಉತ್ಪಾದನಾ ಘಟಕಗಳಲ್ಲಿ ಪುನರಾರಂಭಿಸಿವೆ.
ಸೇವಾ ವಲಯ:
ರಸ್ತೆ, ನೀರಾವರಿ ಯೋಜನೆಗಳು, ಕಟ್ಟಡ, ಎಲ್ಲಾ ರೀತಿಯ ಕೈಗಾರಿಕಾ ಯೋಜನೆಗಳು ಸೇರಿದಂತೆ ನಿರ್ಮಾಣ ಚಟುವಟಿಕೆಗಳು ಶುರುವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಎಂಎಸ್‌ಎಂಇಗಳಿಗೆ ಅನುಮತಿ ನೀಡಲಾಗಿದೆ. ಪುರಸಭೆಗಳಂತಹ ಪಟ್ಟಣ ಪ್ರದೇಶಗಳಲ್ಲಿ ನಿಯಮಿತ ತಾಣಗಳಲ್ಲಿ ಹೊರಗಿನ ಕಾರ್ಮಿಕರನ್ನು ಕರೆಯಿಸಿಕೊಳ್ಳದೆ ಸ್ಥಳೀಯ ಕಾರ್ಮಿಕರ ಬಳಕೆಗೆ ಅವಕಾಶ ನೀಡಲಾಗಿದೆ.
ಕೃಷಿ ಚಟುವಟಿಕೆಗಳು:
ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳು ಏಪ್ರಿಲ್ 20ರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಬೇಸಾಯ ಕಾರ್ಯಾಚರಣೆಗಳು, ಕೃಷಿ ಉತ್ಪನ್ನಗಳ ಖರೀದಿಯಲ್ಲಿ ತೊಡಗಿರುವ ಏಜೆನ್ಸಿಗಳು, ಎಂಎಸ್ಪಿ, ಎಪಿಎಂಸಿ, ಮಂಡಿ ಮಾರುಕಟ್ಟೆಗಳು ತೆರೆದಿವೆ.
ವಿಮಾನಯಾನ:
ಮೂಲಗಳ ಪ್ರಕಾರ ಮೇ 18ರೊಳಗೆ ವಿಮಾನಯಾನ ಕಂಪನಿಗಳಿಗೆ ದೇಶಿಯ ವಿಮಾನ ಕಾರ್ಯಾಚರಣೆ ಪುನರಾರಂಭಿಸಲು ಸರ್ಕಾರ ಚಿಂತಿಸುತ್ತಿದೆ.