ನವದೆಹಲಿ : ಗಡಿ ಘರ್ಷಣೆಯಲ್ಲಿ 20 ಭಾರತೀಯ ಯೋಧರನ್ನು ಚೀನಾ ಸೈನಿಕರು ಕೊಂದ ಬಳಿಕ ಚೀನಾ ವಿರುದ್ಧದ ಭಾರತದ ಧ್ವನಿ ದಿನೇ ದಿನೆ ಹೆಚ್ಚುತ್ತಿದೆ. ಜೊತೆಗೆ ದೇಶಾದ್ಯಂತ ಚೀನಾ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
ಆದರೆ, ಚೀನಾದ ಮೇಲೆ ಭಾರತದ ವ್ಯಾಪಾರ ಅವಲಂಬನೆ ದೊಡ್ಡದಾಗಿದೆ. ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಚೀನಾ ಪ್ರಮುಖ ದೇಶವಾದ್ದರಿಂದ, ಭಾರತದ ಒಟ್ಟು ರಫ್ತು ಮತ್ತು ಆಮದುಗಳಲ್ಲಿ ಚೀನಾದ ಪಾಲು 2019 -20 ರಲ್ಲಿ ಕ್ರಮವಾಗಿ ಶೇ 9ರಷ್ಟು ಮತ್ತು 18ರಷ್ಟು ಆಗಿದೆ.
ಆದರೆ, ಚೀನಾ ಭಾರತಕ್ಕೆ ಹಲವು ವಿಧಗಳಲ್ಲಿ ದ್ರೋಹ ಮಾಡಿರುವುದರಿಂದ ದೇಶದ ವ್ಯಾಪಾರ ಸಂಬಂಧಗಳು ಮತ್ತು ಭೌಗೋಳಿಕ ರಾಜಕೀಯ ಸ್ಥಾಪನೆಯು ಭಾರಿ ಬದಲಾವಣೆಗೆ ಸಾಕ್ಷಿಯಾಗಲಿದೆ. ಕೊರೊನಾ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಹೊಡೆತ ಬಿದ್ದಿದ್ದರೂ, ಎಲ್ಎಸಿಯಲ್ಲಿ ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಬಳಿಕ ಚೀನಾದೊಂದಿಗಿನ ವ್ಯಾಪಾರ ಸಂಬಂಧ ಕೊನೆಗೊಳಿಸಲು ಭಾರತ ಚಿಂತಿಸುತ್ತಿದೆ. ಇದರ ಮೊದಲ ಹೆಜ್ಜೆಯೆಂಬಂತೆ, ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಶನ್ಗಳನ್ನು ಸರ್ಕಾರ ಬ್ಯಾನ್ ಮಾಡಿದೆ.
ಭಾರತ ಚೀನಾವನ್ನು ಅವಲಂಬಿಸಿರುವ ಪ್ರಮುಖ ಕ್ಷೇತ್ರಗಳಲ್ಲಿ ಔಷಧ ಉದ್ಯಮವೂ ಒಂದು. ಔಷಧ ವಿಷಯದಲ್ಲಿ ಭಾರತ ಸ್ವಾವಲಂಬಿಯಾಗಲು ಸರ್ಕಾರ ಹೊಸ ನೀತಿಗಳನ್ನು ರೂಪಿಸಿದರೂ. ಇದು ಕಾರ್ಯರೂಪಕ್ಕೆ ಬರಲು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂಬವುದು ತಜ್ಞರ ಅಭಿಪ್ರಾಯ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಭಾರತೀಯ ಔಷಧ ತಯಾರಕರ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಮದನ್, ಭಾರತವು ಆ್ಯಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರೀಡಿಯೆನ್ಸ್ (ಎಪಿಐ) ಗಾಗಿ ಶೇ. 70 ರಷ್ಟು ಚೀನಾವನ್ನು ಅವಲಂಬಿಸಿದೆ. ಇನ್ನು ಆ್ಯಂಟಿ ಬಯೋಟಿಕ್ ವಿಷಯಕ್ಕೆ ಬಂದರೆ, ಇದು ಶೇ. 92 ರಿಂದ 99 ಇದೆ ಎಂದು ತಿಳಿಸಿದ್ದಾರೆ.
ಇನ್ನು, ಭಾರತದಲ್ಲಿ ಔಷಧ ಉದ್ಯಮಕ್ಕೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಯಾಕೆಂದರೆ ನಾವು ಹೆಚ್ಚು ಹಣವನ್ನು ಖರ್ಚು ಮಾಡಿದರೂ, ಇತರ ಮೂಲಗಳಿಂದ ನಾವು ಅದೇ ವಸ್ತುಗಳನ್ನು ಪಡೆಯುವುದಿಲ್ಲ. ಯುರೋಪಿನಿಂದ ಕೆಲವು ವಸ್ತುಗಳನ್ನು ಹೆಚ್ಚಿನ ಬೆಲೆಗೆ ಪಡೆಯಬಹುದು. ಆದರೆ, ಅವುಗಳಿಗೆ ಅಗತ್ಯವನ್ನು ಪೂರೈಸಲು ಸಾಧ್ಯವಾಗದಿರಬಹುದು. ಯಾಕೆಂದರೆ ಭಾರತದ ಅವಶ್ಯಕತೆ ಪೂರೈಸಲು ಅವರು ಎಷ್ಟೇ ಹೆಚ್ಚುವರಿ ಇಂಗ್ರೀಡಿಯೆನ್ಸ್ ಉತ್ಪಾದಿಸಿದರೂ ಅದಕ್ಕಿಂತ ದೊಡ್ಡದಾಗಿದೆ ಎಂದು ಮದನ್ ಗಮನ ಸೆಳೆದಿದ್ದಾರೆ.
ಭಾರತೀಯ ಔಷಧ ತಯಾರಕ ಕಂಪನಿಗಳು ಎಪಿಐಗಾಗಿ ಚೀನಾವನ್ನು ಹೆಚ್ಚು ಅವಲಂಬಿಸಿದೆ. ಹೀಗಾಗಿ, ಚೀನಾದ ಫಾರ್ಮಾ-ಸಂಬಂಧಿತ ಉತ್ಪನ್ನಗಳ ಮೇಲಿನ ಆಮದು ನಿಷೇಧವು ಭಾರತೀಯ ಸಂಸ್ಥೆಗಳ ಪೂರೈಕೆ ಸರಪಳಿಯ ಅಡೆತಡೆಗಳಿಗೆ ಕಾರಣವಾಗಬಹುದು.
ಭಾರತದ ಫಾರ್ಮಾ ಇತರ ಕ್ಷೇತ್ರಗಳಿಗಿಂತ ಭಿನ್ನವಾಗಿದೆ ಮತ್ತು ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ರಾಸಾಯನಿಕ ಸರಕುಗಳ ವಿಷಯದಲ್ಲಿ ಇಡೀ ಜಾಗತಿಕ ಮಾರುಕಟ್ಟೆಯ ಮೂರನೇ ಎರಡರಷ್ಟು ಭಾಗ ಚೀನಾದ ಕೈಯಲ್ಲಿದೆ ಮತ್ತು ಔಷಧಗಳಲ್ಲಿ ಬಳಸುವ ಎಪಿಐನ ಪ್ರಮುಖ ಸಾಮಗ್ರಿಗಳಲ್ಲಿ ಸುಮಾರು ಶೇ 65-70 ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಪ್ರಸ್ತುತ, ನಾವು ಭಾರತೀಯ ಫಾರ್ಮಾ ಕಂಪನಿಗಳಿಗೆ ಬದ್ಧತೆ ಮತ್ತು ರಫ್ತು ಬಾಧ್ಯತೆಗಳನ್ನು ಹೊಂದಿದ್ದೇವೆ ಎಂದು ಫಾರ್ಮಕ್ಸಿಲ್ನ ಮಹಾನಿರ್ದೇಶಕ ರವಿ ಉದಯ್ ಭಾಸ್ಕರ್ ಹೇಳಿದ್ದಾರೆ.
ಭಾಸ್ಕರ್ ಅವರ ಪ್ರಕಾರ, ಭಾರತಕ್ಕೆ ಸದ್ಯದ ಮಟ್ಟಿಗೆ ಚೀನಾ ಹೊರತು ಬೇರೆ ಪರ್ಯಾಯಗಳಿಲ್ಲ. ಆದರೆ, ಚೀನಾದ ಮೇಲಿನ ಆಮದು ಅವಲಂಬನೆಯನ್ನು ಕಡಿಮೆಗೊಳಿಸಬೇಕಾದರೆ, ಸರ್ಕಾರ ಕ್ಲಸ್ಟರ್ ಕಾರ್ಯಕ್ರಮದಂತ ಯೋಜನೆಯನ್ನು ಜಾರಿಗೊಳಿಸಬೇಕು. ಪ್ರತಿ ಕ್ಲಸ್ಟರ್ಗೆ 1 ಸಾವಿರ ಕೋಟಿ ರೂ. ನೀಡಬೇಕು. ಆದರೂ, ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಹೈಡ್ರಾಕ್ಸಿಕ್ಲೋರೋಕ್ವಿನ್, ಎಪಿಐನ ರಫ್ತು ನೀತಿಯನ್ನು ಸರ್ಕಾರ ಇತ್ತೀಚೆಗೆ ತಿದ್ದುಪಡಿ ಮಾಡಿ, ಅವುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಿದೆ. ಭಾರತವು ಜಾಗತಿಕವಾಗಿ ಹೈಡ್ರಾಕ್ಲೋರೋಕ್ವಿನ್ ಉತ್ಪಾದಿಸುವ ಮತ್ತು ರಫ್ತು ಮಾಡುವ ಪ್ರಮುಖ ದೇಶವಾಗಿದೆ. ಇದು ಮಲೇರಿಯಾಕ್ಕೆ ಹಳೆಯ ಮತ್ತು ದುಬಾರಿ ಚಿಕಿತ್ಸೆಯಾಗಿದೆ. ವಿಶ್ವದ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಕೆಯ ಶೇ. 70 ರಷ್ಟು ಭಾರತ ಉತ್ಪಾದಿಸುತ್ತದೆ.
ಭಾರತದ ಫಾರ್ಮಾ ಉದ್ಯಮವು 2-3 ತಿಂಗಳಿನಿಂದ ಸಾಕಷ್ಟು ಬದಲಾವಣೆಗಳನ್ನು ಹೊಂದಿದೆ. ಆದ್ದರಿಂದ ಪರ್ಯಾಯಕ್ಕಾಗಿ ಯೋಚಿಸುವ ಅವಶ್ಯಕತೆಯಿದೆ. ಭಾರತ ಫಾರ್ಮಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕಾದರೆ, ಸದ್ಯಕ್ಕೆ ಅದು ಅಸಾಧ್ಯ. ನಾವು ನಿರಂತರವಾಗಿ ಗುರಿಯತ್ತ ಕೆಲಸ ಮಾಡುತ್ತಿದ್ದರೆ ಕನಿಷ್ಠ 8-10 ವರ್ಷಗಳಲ್ಲಿ ಈ ಗುರಿಯನ್ನು ತಲುಪಬಹುದು.