ಹೈದರಾಬಾದ್ : ಮನೆಯಿಂದಲೇ ಕೆಲಸ ಮಾಡುತ್ತೇವೆ (ಪರ್ಮನೆಂಟ್ ವರ್ಕ್ ಫ್ರಂ ಹೋಮ್) ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ದೇಶದ ಪ್ರಮುಖ ಐಟಿ ಕಂಪನಿಗಳು ಕಚೇರಿ ವಾತಾವರಣದ ಬದಲಾವಣೆಗೆ ಮುಂದಾಗಿಲ್ಲ. ಈ ಮೂಲಕ ಕಂಪನಿಗಳು ಉದ್ಯೋಗಿಗಳು ಕಚೇರಿಗೆ ಬರಲೇಬೇಕಾಗುತ್ತದೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತಿವೆ ಎನ್ನಲಾಗಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅನಾರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ ಉಪಾಧ್ಯಕ್ಷ ಸಂತೋಷ್ ಕುಮಾರ್, ಭಾರತದ ಹೆಚ್ಚಿನ ಟೆಕ್ ಸಂಸ್ಥೆಗಳು ಮುಂದಿನ ದಶಕದವರೆಗೂ ತಮ್ಮ ಕಚೇರಿ ಗುತ್ತಿಗೆಗಳನ್ನು ನವೀಕರಿಸುತ್ತಿವೆ ಎಂದು ಹೇಳಿದ್ದಾರೆ.
ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಐಟಿ ಕಂಪನಿಗಳು ವರ್ಕ್ ಫ್ರಂ ಹೋಮ್ ಸೂಚಿಸಿದವು. ಅದೇ ಶಾಶ್ವತವಾಗಿ ಮುಂದುವರೆದರೆ ಕಚೇರಿಗಳ ಬೇಡಿಕೆ ದೊಡ್ಡ ಮಟ್ಟದಲ್ಲಿ ಕುಸಿತ ಕಾಣಲಿದೆ ಎನ್ನಲಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶಗಳು ಬೇರೆಯದನ್ನೇ ಹೇಳುತ್ತಿವೆ ಎಂದರು.
ಪ್ರಮುಖ ಕಂಪನಿಗಳಾದ ಆ್ಯಂಕ್ಸೆಂಚರ್, ಒರಾಕಲ್, ಐಬಿಎಂ, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟಿಂಗ್ ಸರ್ವೀಸಸ್, ಮೈಕ್ರೋಸಾಫ್ಟ್ ಮತ್ತು ಕ್ಯಾಪ್ಜೆಮಿನಿ ಇವೆಲ್ಲವೂ ಮನೆಯಿಂದ ಕೆಲಸ ಮಾಡಿದ ಮಾದರಿ ಸಂಪೂರ್ಣ ಯಶಸ್ವಿಯಾದರೂ ತಮ್ಮ ಕಚೇರಿಗಳನ್ನು 8-9 ವರ್ಷಗಳ ಕಾಲ ತಮ್ಮ ಗುತ್ತಿಗೆಯನ್ನು ನವೀಕರಿಸಿವೆ ಎಂದು ಹೇಳಿದರು.
ಕೆಲವು ದೊಡ್ಡ ಐಟಿ ಕಂಪನಿಗಳು ಮಹಾನಗರಗಳಿಂದ ಶ್ರೇಣಿ-II ನಗರಗಳತ್ತ ಧಾವಿಸುತ್ತಿವೆ. ಈ ಮೂಲಕ ಮಾನವ ಸಂಪನ್ಮೂಲ, ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ವೆಚ್ಚಗಳನ್ನು ಉಳಿಸಲು ಮುಂದಾಗಿವೆ.
ಇನ್ನು ಕೆಲವು ಕಂಪನಿಗಳು ಉದ್ಯೋಗಿಗಳ ವಸತಿ ಸ್ಥಳಗಳ ಸಮೀಪದಲ್ಲಿ ಕಚೇರಿ ಸ್ಥಳಾಂತರಕ್ಕೆ ಮುಂದಾಗಿವೆ. ಉದಾಹರಣೆಗೆ, ಟೆಕ್ ಮಹೀಂದ್ರಾ ಮತ್ತು ಸೈಂಟ್ ಈ ವರ್ಷ ತೆಲಂಗಾಣದ ವರಂಗಲ್‌ನ ಮಡಿಕೊಂಡ ಐಟಿ ಪಾರ್ಕ್‌ನಲ್ಲಿ ಹೊಸ ವಿತರಣಾ ಕೇಂದ್ರಗಳನ್ನು ಉದ್ಘಾಟಿಸಿದೆ. ಅಲ್ಲದೆ, ಒಟ್ಟು 1,800 ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ನೇಮಿಸಿಕೊಂಡಿದೆ.
ಕಚೇರಿ ಬಾಡಿಗೆಗಳು ಸ್ಥಿರ: ಮಾಲೀಕರು ತಮ್ಮ ಹಳೆಯ ಬಾಡಿಗೆದಾರರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ವರ್ಷ ಕಚೇರಿ ಬಾಡಿಗೆಗಳು ಹೆಚ್ಚು ಅಥವಾ ಕಡಿಮೆಯಾಗುವುದಿಲ್ಲ. ಸ್ಥಿರವಾಗಿರಲಿದೆ ಎಂದು ಕುಮಾರ್ ಹೇಳಿದರು.