ನವದೆಹಲಿ: ಐಷರಾಮಿ ರೈಲು ಗೋಲ್ಡನ್ ಚಾರಿಯಟ್ ರೈಲು ಸಂಚಾರವನ್ನು ಜನಪ್ರಿಯಗೊಳಿಸಲು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಜಂಟಿಯಾಗಿ ತಿಳವಳಿಕೆ ಪತ್ರಕ್ಕೆ ಸಹಿ ಹಾಕಿವೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಐಆರ್‌ಸಿಟಿಸಿ ಮತ್ತು ಕೆಎಸ್‌ಟಿಡಿಸಿ ನಡುವೆ ಒಪ್ಪಂದ ಏರ್ಪಟ್ಟಿದ್ದರಿಂದ ಮುಂದಿನ ದಿನಗಳಲ್ಲಿ ಈ ರೈಲು ನವರತ್ನ ಸ್ಥಾನಮಾನ ಪಡೆಯಲಿದೆ. ಗೋಲ್ಡನ್ ಚಾರಿಯಟ್ ರೈಲು ಕರ್ನಾಟಕ ಮತ್ತು ಇತರ ದಕ್ಷಿಣ ರಾಜ್ಯಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ನೆರವಾಗಲಿದೆ. ಐಆರ್‌ಸಿಟಿಸಿ ಮತ್ತು ಕೆಎಸ್‌ಟಿಡಿಸಿ ಗೋಲ್ಡನ್ ಚಾರಿಯಟ್ ರೈಲಿನ ದರ ಸ್ಪರ್ಧಾತ್ಮಕವಾಗಿರಿಸಿದರೆ ಸಾಮಾನ್ಯ ಪ್ರಯಾಣಿಕರೂ ಇದರ ಸೇವೆ ಪಡೆಯಲು ಸಾಧ್ಯವಾಗಲಿದೆ ಎಂದರು.
ದೇಶದ 15 ಪ್ರವಾಸೋದ್ಯಮ ತಾಣಗಳನ್ನು ಸಂಪರ್ಕಿಸುವ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಗೋಲ್ಡನ್ ಚಾರಿಯಟ್ ಸೇವೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ ಎಂದರು.
ಕೆಎಸ್‌ಟಿಡಿಸಿ ಶೀಘ್ರದಲ್ಲೇ ರೈಲಿನ ನಿಯಂತ್ರಣವನ್ನು ಐಆರ್‌ಸಿಟಿಸಿಗೆ ಹಸ್ತಾಂತರಿಸಲಿದೆ. ಆಂತರಿಕ ನವೀಕರಣವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಗೋಲ್ಡನ್ ಚಾರಿಯಟ್ ರೈಲು 2020ರ ಮಾರ್ಚ್ ತಿಂಗಳಿಂದ ತನ್ನ ಸೇವೆಯನ್ನು ಆರಂಭಿಸಲಿದೆ. ಕರ್ನಾಟಕ, ಕೇರಳ, ಪುದುಚೇರಿ ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳ ಪ್ರವಾಸಿ ತಾಣಗಳಲ್ಲಿ ಸಂಚರಿಸಲಿದೆ. ರಾಜ್ಯದ ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ವಿಜಯಪುರ ಹಾಗೂ ಗೋವಾ ರಾಜ್ಯಕ್ಕೆ ವಿಸ್ತರಿಸುವಂತೆ ಪ್ರಸ್ತಾಪಿಸಲಾಗಿದೆ.