ನವದೆಹಲಿ : ಹಬ್ಬದ ಋತುವಿಗೆ ಮುಂಚಿತವಾಗಿ ಡೀಸೆಲ್ ಬೇಡಿಕೆ ಹೆಚ್ಚಳವಾಗಿದ್ದು, ಫೆಬ್ರವರಿಯಿಂದ ಭಾರತದ ಇಂಧನ ಬೇಡಿಕೆಯು ಮೊದಲ ವಾರ್ಷಿಕ ಹೆಚ್ಚಳ ದಾಖಲಿಸಿದೆ. ಇದು ಕೋವಿಡ್ ಪೂರ್ವ ಮಟ್ಟದ ಬಳಕೆಯಷ್ಟಾಗಿದೆ.
ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಸೆಲ್ ಪ್ರಕಟಿಸಿದ ತಾತ್ಕಾಲಿಕ ಮಾಹಿತಿಯ ಪ್ರಕಾರ, ಪೆಟ್ರೋಲಿಯಂ ಉತ್ಪನ್ನಗಳ ಒಟ್ಟು ಬೇಡಿಕೆ ಅಕ್ಟೋಬರ್‌ನಲ್ಲಿ ಶೇ 2.5ರಷ್ಟು ಏರಿಕೆಯಾಗಿ 17.77 ದಶಲಕ್ಷ ಟನ್‌ಗಳಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 17.34ರಷ್ಟು ಇತ್ತು.
ಸೆಪ್ಟೆಂಬರ್‌ನಲ್ಲಿಯೇ ಪೆಟ್ರೋಲ್ ಬಳಕೆ ಕೋವಿಡ್ ಪೂರ್ವ ಮಟ್ಟ ತಲುಪಿದ್ದರೆ, ಡೀಸೆಲ್ ಬಳಕೆ ಕಳೆದ ತಿಂಗಳು ಸಾಮಾನ್ಯ ಸ್ಥಿತಿಗೆ ಮರಳಿತು. ಡೀಸೆಲ್ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಶೇ.7.4ರಷ್ಟು ಏರಿಕೆಯಾಗಿ 6.5 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಪೆಟ್ರೋಲ್ ಮಾರಾಟವು ಶೇ. 4.5ರಷ್ಟು ಏರಿಕೆಯಾಗಿ 2.54 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಡೀಸೆಲ್ ಬಳಕೆಯ ಬೆಳವಣಿಗೆ ಒಂದು ವರ್ಷದಲ್ಲಿ ವ್ಯಾಪಕವಾಗಿ ಏರಿಕೆಯಾಗಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೈಗಾರಿಕೆಗಳನ್ನು ಸ್ಥಗಿತಗೊಳಿಸಲಾಯಿತು. ಬಹುತೇಕ ವಾಹನಗಳು ರಸ್ತೆಗೆ ಇಳಿಯದೆ, ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿದ ನಂತರ ಏಪ್ರಿಲ್‌ನಲ್ಲಿ ಇಂಧನ ಬೇಡಿಕೆ ಶೇ.49ರಷ್ಟು ಕುಸಿದಿತ್ತು.
ರಸ್ತೆ ನಿರ್ಮಾಣದಲ್ಲಿ ಬಳಸಲಾಗುವ ಬಿಟುಮೆನ್ ಬಳಕೆಯು ಶೇ.48ರಷ್ಟು ಏರಿಕೆ ಕಂಡು 6,62,000 ಟನ್‌ಗಳಿಗೆ ತಲುಪಿದೆ. ಬಡವರಿಗೆ ಉಚಿತ ಅಡುಗೆ ಅನಿಲ ನೀಡುವ ಸರ್ಕಾರದ ಯೋಜನೆಯಿಂದಾಗಿ ಲಾಕ್‌ಡೌನ್ ಅವಧಿಯಲ್ಲಿ ವೃದ್ಧಿಗೊಂಡ ಏಕೈಕ ಇಂಧನವಾಗಿದ್ದು, ಶೇ. 3ರಷ್ಟು ಏರಿಕೆಯಾಗಿ 2.4 ಮಿಲಿಯನ್ ಟನ್‌ಗಳಿಗೆ ತಲುಪಿದೆ.
ವಿಮಾನಯಾನ ಟರ್ಬೈನ್ ಇಂಧನ ಅಥವಾ ಎಟಿಎಫ್ ಮಾರಾಟವು ಸುಮಾರು 3,55,000 ಟನ್‌ಗಳಷ್ಟಾಗಿ ಅರ್ಧದಷ್ಟು ಕಡಿಮೆಯಾಗಿದೆ. ಬಹುತೇಕ ವಿಮಾನಯಾನ ಸಂಸ್ಥೆಗಳು ಪೂರ್ಣ ಕಾರ್ಯಾಚರಣೆ ಪುನರಾರಂಭಿಸಿಲ್ಲ.