ನವದೆಹಲಿ: ಪಳೆಯುಳಿಕೆ ಇಂಧನದ ಬದಲಾಗಿ ಪರಿಸರ ಸ್ನೇಹಿ ಇಂಧನವು, ಮುಂದಿನ ದಿನಗಳಲ್ಲಿ ಸೌರ ಮತ್ತು ಹೈಡ್ರೋಜನ್ ಶಕ್ತಿಯ ಪ್ರಮುಖ ಸಂಪನ್ಮೂಲವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ. ಭಾರತವು ತನ್ನ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಪರಿಸರ ಸ್ನೇಹಿ ಇಂಧನವನ್ನು ಬಳಸುತ್ತಿರುತ್ತದೆ ಎಂದಿದ್ದಾರೆ.
ಹವಾಮಾನ ವೈಪರಿತ್ಯದಿಂದ ಇಡೀ ವಿಶ್ವವು ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರವೆಂದರೇ ಅದು ಪರಿಸರ ಸ್ನೇಹಿ ಇಂಧನದ ಬಳಕೆಯಾಗಿದೆ. ಇದನ್ನು ನಾವು ಪರಸ್ಪರ ಸಹಕಾರ ಮತ್ತು ಪಾಲುದಾರಿಕೆಯಿಂದ ಮಾಡಬೇಕಾಗಿದೆ. ಪ್ರಪಂಚವು ಹಳೆಯ ಶಕ್ತಿಯಿಂದ ಹೊಸ ಶಕ್ತಿಗೆ ಶೀಘ್ರ ಪರಿವರ್ತನೆಯಾಗಬೇಕು ಎಂದರು.
ನಮ್ಮ ಯುವ ಮತ್ತು ಸೂಪರ್-ಪ್ರತಿಭಾನ್ವಿತ ಉದ್ಯಮಿಗಳು ಮುಂದಿನ 20 ವರ್ಷಗಳಲ್ಲಿ ಭಾರತವನ್ನು ಗ್ರೀನ್ ಎನರ್ಜಿ ಸೂಪರ್ ಪವರ್ ಮಾಡಲಿದ್ದಾರೆ. ಇದೇ ಸಮಯದಲ್ಲಿ ಭಾರತವು ಐಟಿ ಸೂಪರ್ ಪವರ್ ಆಗಿ ಮಾರ್ಪಡಲಿದೆ ಎಂದು ಅಂಬಾನಿ ಹೇಳಿದರು.
ಇದನ್ನೂ ಓದಿ: ಯುಪಿ ವಿಧಾನಸಭಾ ಚುನಾವಣೆ 2022: ಲಕ್ನೋದ ಮಾರಿ ಮಾತಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಿಯಾಂಕಾ
ಮುಂದಿನ 2-3 ದಶಕಗಳ ಕಾಲ ಕಲ್ಲಿದ್ದಲು ಮತ್ತು ತೈಲ ಆಮದು ಮಾಡಿಕೊಳ್ಳುವ ಭಾರತದ ಅವಲಂಬನೆ ಮುಂದುವರಿಯಲಿದೆ. ಆದರೆ ಇದೇ ಅವಧಿಯಲ್ಲಿ ಅದನ್ನು ತೊಡೆದುಹಾಕಲು ನಾವು ಯೋಜನೆಯನ್ನು ಹೊಂದಿರಬೇಕು. ಆದ್ದರಿಂದ ನಾವು ಕಡಿಮೆ ಕಾರ್ಬನ್ ಮತ್ತು ಬೋ-ಕಾರ್ಬನ್ ಅಭಿವೃದ್ಧಿಯ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಸಿದರು.
ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ ಎಂದು ನಾನು ನಂಬುತ್ತೇನೆ ಮತ್ತು ಮುಂದಿನ ಒಂದೆರಡು ದಶಕಗಳಲ್ಲಿ ನಮ್ಮ ಶಕ್ತಿಯ ಅಗತ್ಯಗಳು ದ್ವಿಗುಣಗೊಳ್ಳಲಿವೆ. ನನ್ನ ದೃಷ್ಟಿಯಲ್ಲಿ, ಸುಮಾರು 2030-2032 ರ ಹೊತ್ತಿಗೆ ಭಾರತವು ಯುರೋಪಿಯನ್ ಒಕ್ಕೂಟವನ್ನು ಹಿಂದಿಕ್ಕಿ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಂಬಾನಿ ಭವಿಷ್ಯ ನುಡಿದಿದ್ದಾರೆ.