ನವದೆಹಲಿ: ಈ ಮಾಸಿಕದ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಥಮ ಬಾರಿಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಮೋದಿ-ಟ್ರಂಪ್ ಭೇಟಿಗೂ ಮುನ್ನ ಉಭಯ ರಾಷ್ಟ್ರಗಳ ನಡುವೆ ಏರ್ಪಡಲಿರುವ ಉದ್ದೇಶಿತ ವ್ಯಾಪಾರ ಒಪ್ಪಂದಗಳ ಅನುಷ್ಠಾನಕ್ಕೆ ಅಧಿಕಾರಿಗಳು ತೆರೆಮೆರೆಯಲ್ಲಿ ಕಾರ್ಯಪ್ರತ್ತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 24-25ರಂದು ಪ್ರವಾಸ ಕೈಗೊಳ್ಳುವ ಅಧ್ಯಕ್ಷ ಟ್ರಂಪ್, ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುತ್ತಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಭಾರಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಮೆರಿಕ 'ಹೌಡಿ ಮೋದಿ' ಸಮಾವೇಶ ಆಯೋಜಿಸಿತ್ತು. ಇದೇ ಮಾದರಿಯಂತೆ ಅಹಮದಾಬಾದ್ನಲ್ಲಿ ಟ್ರಂಪ್ಗಾಗಿ ಕೇಂದ್ರ ಸರ್ಕಾರ 'ಕೇಮ್ಛೋ ಟ್ರಂಪ್' ಕಾರ್ಯಕ್ರಮವನ್ನು ಆಯೋಜಿಸಲಿದೆ.
ಕಳೆದ ಕೆಲವು ವಾರಗಳಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಅಮೆರಿಕ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲೈಟ್‌ಜೈಜರ್ ಅವರ ನಡುವೆ ದೂರವಾಣಿ ಮುಖೇನ ಅನೇಕ ಸುತ್ತಿನ ಮಾತುಕತೆಗಳು ನಡೆದಿವೆ. ಕೆಲವು ಸಮಸ್ಯೆಗಳನ್ನು ಪರಿಹರಿಸಲು ಮತ್ತು ದ್ವಿಮುಖ ವಾಣಿಜ್ಯ- ವಹಿವಾಸು ಉತ್ತೇಜಿಸಲು ಉಭಯ ರಾಷ್ಟ್ರಗಳ ವಾಣಿಜ್ಯ ಸಚಿವರು ಚರ್ಚಿಸಿದ್ದಾರೆ.
ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ಅಮೆರಿಕ ವಿಧಿಸಿರುವ ಹೆಚ್ಚಿನ ಸುಂಕದಿಂದ ವಿನಾಯಿತಿ ನೀಡಬೇಕೆಂದು ಭಾರತ ಒತ್ತಾಯಿಸುತ್ತಿದೆ. ಕೆಲವು ದೇಶಿಯ ಉತ್ಪನ್ನಗಳಿಗೆ ಸಾಮಾನ್ಯ ಆದ್ಯತಾ ಕಾರ್ಯಕ್ರಮಗಳ (ಜಿಎಸ್ಪಿ) ಅಡಿಯಲ್ಲಿ ರಫ್ತು ಪ್ರಯೋಜನಗಳನ್ನು ಪುನರಾರಂಭಿಸಬೇಕು. ವಾಹನಗಳ ಬಿಡಿ ಭಾಗ, ಕೃಷಿ, ವಾಹನ ಸೇರಿದಂತೆ ಇತರ ಕ್ಷೇತ್ರಗಳ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯ ಪ್ರವೇಶ ಒದಗಿಸುವಂತೆಯೂ ಭಾರತ ಕೋರಿದೆ.
ಮತ್ತೊಂದೆಡೆ ಅಮೆರಿಕ ತನ್ನ ಕೃಷಿ, ಉತ್ಪಾದನಾ ಉತ್ಪನ್ನಗಳು, ಡೈರಿ ಪ್ರಾಡಕ್ಟ್ಗಳು, ವೈದ್ಯಕೀಯ ಸಾಧನಗಳು, ದತ್ತಾಂಶದ ಸ್ಥಳೀಕರಣ, ಕೆಲವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಉತ್ಪನ್ನಗಳ ಮೇಲೆ ಆಮದು ಸುಂಕ ಕಡಿತಗೊಳಿಸುವ ಇಂಗಿತ ತೋರ್ಪಡಿಸಿದೆ. ಇನ್ನೂ ಹೆಚ್ಚಿನ ಭಾರತೀಯ ಮಾರುಕಟ್ಟೆ ಪ್ರವೇಶವನ್ನೂ ಅದು ಬಯಸುತ್ತಿದೆ. ಭಾರತದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆಯೂ ಅದು ಕಳವಳ ವ್ಯಕ್ತಪಡಿಸಿದೆ.
2018-19ರಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣ 52.4 ಬಿಲಿಯನ್ ಡಾಲರ್ ಆಗಿದ್ದರೆ ಆಮದು ಪ್ರಮಾಣ 35.5 ಬಿಲಿಯನ್ ಡಾಲರ್ ಆಗಿತ್ತು. ವ್ಯಾಪಾರ ಕೊರತೆಯು 2017-18ರಲ್ಲಿ 21.3 ಬಿಲಿಯನ್ ಡಾಲರ್‌ನಿಂದ 2018-19ರಲ್ಲಿ 16.9 ಬಿಲಿಯನ್ ಡಾಲರ್‌ಗೆ ಇಳಿದಿದೆ. 2018-19ರಲ್ಲಿ ಭಾರತ 3.13 ಬಿಲಿಯನ್ ಡಾಲರ್ನಷ್ಟು ಎಫ್ಡಿಐ ಸ್ವೀಕರಿಸಿದೆ. 2017-18ನೇ ಸಾಲಿನಲ್ಲಿ ಇದು 2 ಬಿಲಿಯನ್ ಡಾಲರ್ನಷ್ಟಿತ್ತು.