ನವದೆಹಲಿ: 2021ರ ಹಣಕಾಸು ವರ್ಷದಲ್ಲಿನ ಯೋಜಿತ ಕ್ಯಾಪೆಕ್ಸ್ (ಬಂಡವಾಳ ವೆಚ್ಚ) ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಹಾನಿಗೊಳಗಾದ ಆರ್ಥಿಕತೆಯ ಬೆಳವಣಿಗೆ ಕಾಯ್ದುಕೊಳ್ಳುವಂತೆ ಸರ್ಕಾರ ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್‌ಯು) ಒತ್ತಾಯಿಸಿದೆ.
ಖಾಸಗಿ ಹೂಡಿಕೆಯು ಈಗಾಗಲೇ ಸ್ಥಗಿತಗೊಂಡಿದೆ. ಸರ್ಕಾರವು ಇದನ್ನು ನಿರ್ವಹಿಸುವ ಕಂಪನಿಗಳು ಖರ್ಚನ್ನು ಹೆಚ್ಚಿಸುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಿ ದೇಶದ ಮನಸ್ಥಿತಿಯನ್ನು ಬದಲಿಸಬೇಕೆಂದು ಬಯಸುತ್ತಿದೆ. ಇದು ಆದಾಯದ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂಬುದು ಸರ್ಕಾರದ ವಾದ.
ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಉಕ್ಕು ಮತ್ತು ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ 7 ಸಿಪಿಎಸ್ಇ ಕಾರ್ಯದರ್ಶಿಗಳ ಜತೆ ಸಭೆ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ಯಮಗಳು (ಸಿಪಿಎಸ್ಇ) ಉತ್ತಮ ಕಾರ್ಯಕ್ಷಮತೆ ತೋರಿದರೇ ಕೋವಿಡ್-19ರ ಪ್ರಭಾವದಿಂದ ಚೇತರಿಸಿಕೊಳ್ಳಲು ಆರ್ಥಿಕತೆಗೆ ದೊಡ್ಡ ರೀತಿಯಲ್ಲಿ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಸಿಪಿಎಸ್‌ಇಗಳು 2021ರ ವಿತ್ತೀಯ ವರ್ಷದಲ್ಲಿ ಒದಗಿಸಿದ ಬಂಡವಾಳ ವೆಚ್ಚವನ್ನು ಸರಿಯಾಗಿ ಮತ್ತು ಸಮಯದೊಳಗೆ ಖರ್ಚು ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
2020-21ರ ಎರಡನೇ ತ್ರೈಮಾಸಿದ ವೇಳೆಗೆ ಬಂಡವಾಳ ವೆಚ್ಚ ಶೇ 50ರಷ್ಟನ್ನು ಖಾತ್ರಿಪಡಿಸಿಕೊಳ್ಳಲು ಸಿಪಿಎಸ್‌ಇಗಳ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸೀತಾರಾಮನ್ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದ್ದಾರೆ.
ಈ ಯೋಜನೆ ಸಾಧನೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಬಗೆಹರಿಯದ ಯಾವುದೇ ಸಮಸ್ಯೆಗಳು ಇದ್ದರೇ ತಕ್ಷಣದ ಪರಿಹಾರಕ್ಕಾಗಿ ಸಚಿವಾಲಯದ ಗಮನಕ್ಕೆ ತರಬೇಕು ಎಂದರು.