ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ ಅವರು, ತಮ್ಮ ಅವಧಿ ಪೂರ್ಣವಾಗುವ ಮುನ್ನ ಹಠಾತ್ತಾಗಿ ರಾಜೀನಾಮೆ ಸಲ್ಲಿಸಿ 2018ರ ಡಿಸೆಂಬರ್ 11ರಂದು ಹೊರ ನಡೆದಿದ್ದರು. ಈ ಬಗ್ಗೆ ಒಂದು ವರ್ಷದ ಬಳಿಕ ಮೌನ ಮುರಿದಿದ್ದಾರೆ.
ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುವತ್ತ ನಡೆಸಿದ ಕ್ರಮಗಳು ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್ ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿ ಉರ್ಜಿತ್ ಪಟೇಲ್ ಅವರು ತಮ್ಮ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಶುಕ್ರವಾರ ಬಿಡುಗಡೆಯಾದ ಪುಸ್ತಕವೊಂದರಲ್ಲಿ, 2016ರ ಸೆಪ್ಟೆಂಬರ್ನಲ್ಲಿ ಆರ್‌ಬಿಐ ಮುಖ್ಯಸ್ಥರಾಗಿದ್ದ ಪಟೇಲ್ ಅವರು 2018ರ ಡಿಸೆಂಬರ್‌ನಲ್ಲಿ ಅವರ ಅನಿರೀಕ್ಷಿತ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ವರ್ಷದಲ್ಲಿ ಸರ್ಕಾರವು ಕಾನೂನಿನ ಬಗ್ಗೆ ಆಸಕ್ತಿ ಕಳೆದುಕೊಂಡಂತೆ ಕಾಣುತ್ತದೆ ಎಂದು ಹೇಳಿದರು ಎಂದಿದೆ.
ಮರುಪಾವತಿ ವಿಳಂಬ ಆದಾಗ ಸಾಲಗಾರರನ್ನು ತಕ್ಷಣವೇ ಡೀಫಾಲ್ಟರ್ ಎಂದು ವರ್ಗೀಕರಿಸಲು ಬ್ಯಾಂಕ್ಗಳನ್ನು ಒತ್ತಾಯಿಸಿ 2018ರ ಫೆಬ್ರವರಿಯಲ್ಲಿ ಆರ್‌ಬಿಐ ಹೊರಡಿಸಿದ ಸುತ್ತೋಲೆಯೇ ಬಿರುಕಿಗೆ ಕಾರಣವಾಯಿತು. ದಿವಾಳಿತನದ ಹರಾಜಿನ ಸಮಯದಲ್ಲಿ ಡೀಫಾಲ್ಟ್ ಕಂಪನಿಯ ಸಂಸ್ಥಾಪಕರು ತಮ್ಮ ಸಂಸ್ಥೆಗಳನ್ನು ಮರಳಿ ಖರೀದಿಸಲು ಪ್ರಯತ್ನಿಸುವುದನ್ನು ಈ ಸುತ್ತೋಲೆ ನಿರ್ಬಂಧಿಸಿದೆ.
ಆರ್‌ಬಿಐ ಕಾಯ್ದೆ 1934ರ ಸೆಕ್ಷನ್ 7 ಬಳಕೆಯ ಸಂಬಂಧ, ಆರ್‌ಬಿಐ ಬಳಿ ಇರುವ ಮೀಸಲು ನಿಧಿಯ ಕೆಲ ಭಾಗವನ್ನು ತನಗೆ ವರ್ಗಾಯಿಸಬೇಕು ಎಂದು ಸರ್ಕಾರ ಪಟ್ಟು ಹಿಡಿದಿತ್ತು. ಆದರೆ, ಆರ್‌ಬಿಐ, ಕೇಂದ್ರದ ಈ ನಿಲುವಿಗೆ ತೀವ್ರ ಪ್ರತಿರೋಧ ಒಡ್ಡಿತ್ತು. ಇದು ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ಬಾಂಧವ್ಯ ಹಳಸಲು ಕಾರಣವಾಗಿತ್ತು.