ನವದೆಹಲಿ : ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ಮಧ್ಯೆ ರಕ್ಷಣಾ ಸಚಿವಾಲಯವು 2,290 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಸಂಗ್ರಹಣೆಗೆ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಚಿವಾಲಯದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಈ ಖರೀದಿ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯು ಭಾರತೀಯ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ವಿವಿಧ ಉಪಕರಣಗಳ ಸುಮಾರು 2,290 ಕೋಟಿ ರೂ. ವೆಚ್ಚದಲ್ಲಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ದೇಶೀಯ ಉದ್ಯಮದಿಂದ ಮಾತ್ರವಲ್ಲದೆ ವಿದೇಶಿ ಮಾರಾಟಗಾರರಿಂದ್ಲೂ ಈ ಸಂಗ್ರಹ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಸ್ವದೇಶಿ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ (ಐಡಿಡಿಎಂ) ವಿಭಾಗದಲ್ಲಿ ಡಿಎಸಿ ಸುಮಾರು 1,510 ಕೋಟಿ ರೂ. ವೆಚ್ಚದಲ್ಲಿ ಸ್ಟ್ಯಾಟಿಕ್ ಹೆಚ್ ಎಫ್ ಟ್ಯಾನ್ಸ್-ರಿಸೀವರ್ ಸೆಟ್ ಮತ್ತು ಸ್ಮಾರ್ಟ್ ಆಂಟಿ ಏರ್‌ಫೀಲ್ಡ್ ವೆಪನ್ (ಎಸ್‌ಎಎಡಬ್ಲ್ಯೂ) ಖರೀದಿಗೆ ಅನುಮೋದನೆ ನೀಡಿತು. ಹೆಚ್‌ಎಫ್ ರೇಡಿಯೊ ಸೆಟ್‌ಗಳನ್ನು ಅಂದಾಜು 540 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುತ್ತದೆ. ಇವು ಸೈನ್ಯ ಮತ್ತು ವಾಯುಪಡೆಯ ನಡುವೆ ತಡೆರಹಿತ ಸಂವಹನಕ್ಕೆ ಅನುವು ಮಾಡಿಕೊಡಲಿವೆ. ಸ್ಮಾರ್ಟ್ ಆಂಟಿ ಏರ್‌ಫೀಲ್ಡ್ ವೆಪನ್ ಸುಮಾರು 970 ಕೋಟಿ ರೂ. ವೆಚ್ಚವಾಗಲಿದ್ದು, ಇದು ನೌಕಾಪಡೆ ಮತ್ತು ವಾಯುಪಡೆಯ ಅಗ್ನಿಶಾಮಕ ದಳದ ಸಾಮರ್ಥ್ಯ ವೃದ್ಧಿಸಲಿದೆ.
ಗಡಿಯಲ್ಲಿ ಸೈನ್ಯದ ಮುಂಚೂಣಿ ಪಡೆಗಳನ್ನು ಸಜ್ಜುಗೊಳಿಸಲು, ಡಿಎಸಿ ಸುಮಾರು 780 ಕೋಟಿ ರೂ. ವೆಚ್ಚದಲ್ಲಿ ಸಿಗ್ ಸೌರ್ ಅಸಾಲ್ಟ್ ರೈಫಲ್ಗಳನ್ನು ಖರೀದಿಸಲು ಅನುಮೋದನೆ ನೀಡಿತು. ಈ ಹೊಸ ಪ್ರಸ್ತಾಪವು ಭೂ ಸೇನೆಯ ಆಧುನೀಕರಣದ ಭಾಗವಾಗಿ 2019ರ ಆರಂಭದಲ್ಲಿ ಅಮೆರಿಕ ಜತೆಗೆ 72,400 ರೈಫಲ್‌ಗಳ ಆರ್ಡರ್ ಒಳಗೊಂಡಿದೆ.