ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆ ಪಾವತಿದಾರರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಇರಿಸಿಕೊಂಡಿದೆ.
ಕೇಂದ್ರ ಸರ್ಕಾರವು 2019-20ನೇ ಹಣಕಾಸು ವರ್ಷದಲ್ಲಿ ಹೊಸದಾಗಿ 1.3 ಕೋಟಿ ತೆರಿಗೆ ಸಲ್ಲಿಸುವವರನ್ನು ಹೆಚ್ಚಿಸುವ ಉದ್ದೇಶ ಇರಿಸಿಕೊಂಡಿದೆ. ಕಳೆದ ವರ್ಷ ಐಟಿ ರಿಟರ್ನ್ಸ್ ವ್ಯಾಪ್ತಿಗೆ 1.1 ಕೋಟಿ ಜನರು ಸೇರ್ಪಡೆ ಆಗಿದ್ದರು . 2018-19ರ ವಿತ್ತೀಯ ವರ್ಷದಲ್ಲಿ ಒಟ್ಟು 8.44 ಕೋಟಿ ತೆರಿಗೆ ಪಾವತಿದಾರರು ಇದ್ದರು ಎಂದು ಹಣಕಾಸು ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
ಐಟಿ ರಿಟರ್ನ್ಸ್ ಸಲ್ಲಿಸುವರರ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದಾಯ ತೆರಿಗೆ ಇಲಾಖೆಯ ನಾನ್ ಫೈಲರ್ಸ್ ಮಾನಿಟರಿಂಗ್ ಸಿಸ್ಟಮ್ನ (ಎನ್ಎಂಎಸ್) ಅಡಿ ತೆರಿಗೆ ವ್ಯಾಪ್ತಿಗೆ ಬರುವವರನ್ನು ಪರಿಶೀಲಿಸಲಾಗುತ್ತಿದೆ. ತೆರಿಗೆ ವಂಚಕರಿಗೆ ನೋಟಿಸ್ಗಳನ್ನು ನೀಡಿ, ಶಿಸ್ತು ಕ್ರಮ ಜರುಗಿಸುತ್ತಿದ್ದೇವೆ. ತೆರಿಗೆ ಪಾವತಿಯನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುತ್ತಿದೆ ಎಂದು ಹಣಕಾಸು ಖಾತೆಯೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಲಿಖಿತ ಉತ್ತರದಲ್ಲಿ ಹೇಳಿದರು.
2019ರ ಜುಲೈ 30ರವರೆಗೆ ಪರ್ಮಿನೆಂಟ್ ಅಕೌಂಟ್ ನಂಬರ್ಸ್ (ಪಾನ್) ಹೊಂದಿದವರ ಸಂಖ್ಯೆ 46,13,91,168 ತಲುಪಿದೆ. ದೇಶಾದ್ಯಂತ ಪಾನ್ - ಟಿನ್ (ಟ್ಯಾಕ್ಸ್ ಐಡೆಂಟಿಫಿಕೆಷನ್ ನಂಬರ್) ಕೇಂದ್ರಗಳ ಸಂಖ್ಯೆ ಕೂಡ 30,618 ದಾಟಿದೆ ಎಂದು ತಿಳಿಸಿದರು.