ನವದೆಹಲಿ: ಅಸ್ಸೊಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ನಾಲ್ಕು ರಾಜ್ಯಗಳು ಹಣಕಾಸು ಸಚಿವಾಲಯವು ನಿಗದಿಪಡಿಸಿದ 'ಸುಲಲಿತ ವ್ಯಾಪಾರ'ದಡಿ ಸುಧಾರಣೆಗಳನ್ನು ಕೈಗೊಂಡಿವೆ.
ಇದರೊಂದಿಗೆ ಈ ರಾಜ್ಯಗಳು ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಅರ್ಹತೆ ಪಡೆದಿವೆ. ಮುಕ್ತ ಮಾರುಕಟ್ಟೆ ಸಾಲಗಳ ಮೂಲಕ ಹೆಚ್ಚುವರಿ 5,034 ಕೋಟಿ ರೂ. ಎತ್ತಲು ಅನುಮತಿ ನೀಡಲಾಗಿದೆ.
ವ್ಯಾಪಾರ ಮಾಡಲು ಸುಲಭವಾಗುವಂತೆ ನಿಗದಿತ ಸುಧಾರಣೆಗಳನ್ನು ಕೈಗೊಂಡ ಒಟ್ಟು ರಾಜ್ಯಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಹಿಂದೆ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣಗಳು ಸಹ ಈ ಸುಧಾರಣೆಯನ್ನು ಪೂರ್ಣಗೊಳಿಸಿವೆ ಎಂದು ವರದಿ ಮಾಡಿದೆ. ಇದನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ದೃಢಪಡಿಸಿದೆ.
ಇದನ್ನೂ ಓದಿ: ರೈತರೊಂದಿಗೆ ಊಟ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
ವ್ಯಾಪಾರವನ್ನು ಸುಲಭಗೊಳಿಸಲು ಸುಧಾರಣೆಗಳನ್ನು ಪೂರ್ಣಗೊಳಿಸಿದ ಬಳಿಕ ಈ ಹನ್ನೆರಡು ರಾಜ್ಯಗಳಿಗೆ 28,183 ಕೋಟಿ ರೂ. ಹೆಚ್ಚುವರಿ ಸಾಲದ ಅನುಮತಿ ನೀಡಲಾಗಿದೆ. ವ್ಯಾಪಾರ ಮಾಡುವ ಸುಲಭತೆಯು ದೇಶದ ಹೂಡಿಕೆ ಸ್ನೇಹಿ ವ್ಯಾಪಾರ ವಾತಾವರಣದ ಪ್ರಮುಖ ಸೂಚಕವಾಗಿದೆ. ವ್ಯವಹಾರವನ್ನು ಸುಲಭಗೊಳಿಸುವುದರಿಂದ ರಾಜ್ಯ ಆರ್ಥಿಕತೆಯ ಭವಿಷ್ಯದ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.