ನವದೆಹಲಿ: ಕೈಗಾರಿಕಾ ಒಕ್ಕೂಟ ಫಿಕ್ಕಿ 25 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಕೋವಿಡ್ 2ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆ ಆಗುತ್ತಿದ್ದು, ಭಾಗಶಃ ಅಥವಾ ಸಂಪೂರ್ಣ ಲಾಕ್‌ಡೌನ್ ಹೇರುವುದನ್ನು ತಪ್ಪಿಸುವಂತೆ ಒತ್ತಾಯಿಸಿದೆ.
ಈ ಹಿಂದಿನ ಸರಣಿ ಲಾಕ್‌ಡೌನ್‌ಗಳ ಪ್ರಭಾವದಿಂದ ಆರ್ಥಿಕತೆಯು ಚಕ್ರದಂತೆ ತಿರುಗುತ್ತಿದೆ. ಈಗ ಮತ್ತೆ ಅಂತಹ ನಿರ್ಧಾರಗಳು ಆರ್ಥಿಕತೆ ಕೆಳಮುಖವಾಗಿ ತಳ್ಳುತ್ತವೆ ಎಂದು ಉದ್ಯಮ ಸಂಸ್ಥೆ ವಾದಿಸಿದೆ.
ಫಿಕ್ಕಿ ಅಧ್ಯಕ್ಷ ಉದಯ್ ಶಂಕರ್ ಅವರು ರಾಜ್ಯಗಳ ಸಿಎಂಗಳಿಗೆ ಬರೆದ ಪತ್ರದಲ್ಲಿ, ಕೋವಿಡ್ ಸರಪಳಿ ಮುರಿಯುವ ಅಗತ್ಯವನ್ನು ಚೇಂಬರ್ ಒಪ್ಪಿಕೊಂಡಿದೆ. ಆದರೆ, ಲಾಕ್‌ಡೌನ್ ಹೇರುವುದಕ್ಕಿಂತ ಕೋವಿಡ್ ಪರೀಕ್ಷೆ, ಜಾಗೃತಿ ಚಾಲನೆ ಮತ್ತು ಕೋವಿಡ್ ಮಾರ್ಗ ಸೂಚಿ ಜಾರಿಗೊಳಿಸುವುದರ ಬಗ್ಗೆ ಹೆಚ್ಚು ಗಮನಹರಿಸುವ ತಂತ್ರವನ್ನು ಅದು ಸೂಚಿಸಿದೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ವೈಯಕ್ತಿಕ ನೈರ್ಮಲ್ಯದಂತಹ ಕೋವಿಡ್ ಸೂಕ್ತ ನಡವಳಿಕೆಯತ್ತ ಗಮನಹರಿಸಿ. ಶಾಲೆಗಳು, ಕಾಲೇಜುಗಳು ಮತ್ತು ಎನ್‌ಜಿಒಗಳ ಸ್ವಯಂಸೇವಕರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬೆಂಬಲ ಪಡೆಯಬಹುದು. ಮಾರ್ಗಸೂಚಿ ಉಲ್ಲಂಘನೆಗಳಿಗೆ ಸೂಕ್ತ ದಂಡದಂತಹ ಕೋವಿಡ್ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಹಾರಿಗೆ ತರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಲಸಿಕೆಗಳ ಕೊರತೆಯಿಲ್ಲದ ಕಾರಣ ವ್ಯಾಕ್ಸಿನೇಷನ್ ಡ್ರೈವ್‌ಗೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆ ನೀಡುವಂತೆ ಫಿಕ್ಕೆ ಕೇಂದ್ರ ಸರ್ಕಾರವನ್ನು ಕೋರಿದೆ. ಖಾಸಗಿ ವಲಯದ ಸಹಭಾಗಿತ್ವದ ಜತೆಗೂಡಿ ಇನಾಕ್ಯುಲೇಷನ್ ಸಾಮರ್ಥ್ಯ ಹೆಚ್ಚಿಸಬಹುದು ಎಂದಿದೆ.
ದೆಹಲಿ, ಗೋವಾ, ಪುದುಚೇರಿ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ರಾಜಸ್ಥಾನ, ಹರಿಯಾಣ, ಜಮ್ಮು & ಕಾಶ್ಮೀರ, ಒಡಿಶಾ, ಕೇರಳ, ಗುಜರಾತ್, ಅಸ್ಸೋಂ, ತಮಿಳುನಾಡು ಸೇರಿದಂತೆ 25 ರಾಜ್ಯಗಳ ಸಿಎಂಗಳಿಗೆ ಈ ಪತ್ರ ಬರೆಯಲಾಗಿದೆ.