ನವದೆಹಲಿ: ಕೇಂದ್ರ ಸರ್ಕಾರದ ಹೊಸ ಡಿಜಿಟಲ್ ನಿಯಮವನ್ನು ಪಾಲಿಸಲು ಒಪ್ಪಿಕೊಂಡಿರುವ Facebook ಇದೀಗ ತಪ್ಪು ಮಾಹಿತಿಯನ್ನು ಹಂಚಿಕೊಂಡ ಬಳಕೆದಾರರ ಎಲ್ಲಾ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಫೇಸ್‌ಬುಕ್ ಹಾಗೂ ಫೇಸ್‌ಬುಕ್ ಒಡೆತನದಲ್ಲಿ ಬರುವ WhatsApp, Instagram ಸೇರಿದಂತೆ ಇತರ ಆ್ಯಪ್ಗಳಲ್ಲಿ ಕೋವಿಡ್-19 ಲಸಿಕೆ, ಹವಾಮಾನ ಬದಲಾವಣೆ, ಚುನಾವಣೆಗಳು ಅಥವಾ ಇತರ ವಿಷಯಗಳ ಬಗ್ಗೆ ಸುಳ್ಳು ಅಥವಾ ಜನರ ದಾರಿತಪ್ಪಿಸುವ ಮಾಹಿತಿಯುಳ್ಳ ಪೋಸ್ಟ್‌ಗಳು ಈ ಹೊಸ ನಿಯಮಕ್ಕೆ ಗುರಿಯಾಗಿವೆ.
"ಇಂದಿನಿಂದ, ನಮ್ಮ ಫ್ಯಾಕ್ಟ್-ಚೆಕಿಂಗ್ ತಂಡವು ಇಂತಹ ಪೋಸ್ಟ್‌ಗಳ ಮೇಲೆ ನಿಗಾ ಇರಿಸಿ, ರೇಟ್ ಮಾಡುತ್ತದೆ. ನಿಮ್ಮ ಪೋಸ್ಟ್ ರೇಟಿಂಗ್ ಆದ ಬಳಿಕವೂ ಅಂತಹದಲ್ಲೇ ತಪ್ಪು ಮಾಹಿತಿಯುಳ್ಳ ಪೋಸ್ಟ್ಗಳನ್ನ ಮತ್ತೆ ಮಾಡಿದರೆ ಅವುಗಳನ್ನು ಫೇಸ್‌ಬುಕ್ ನ್ಯೂಸ್ ಫೀಡ್ನಲ್ಲಿ ಶೇರ್ ಆಗುವುದನ್ನು ಕಡಿಮೆ ಮಾಡಲಾಗುವುದು ಎಂದು ಫೇಸ್‌ಬುಕ್ ತಿಳಿಸಿದೆ.
![Facebook to push down all posts from users who share misinformation](https://etvbharatimages.akamaized.net/etvbharat/prod-images/11915099_facebook-2.png)
ಈ ಮೂಲಕ ಇಂತಹ ಪೋಸ್ಟ್‌ಗಳ ವೀಕ್ಷಣೆ ಕಡಿಮೆಯಾಗಲಿದೆ. ಫ್ಯಾಕ್ಟ್-ಚೆಕಿಂಗ್ ರೇಟಿಂಗ್ ಬಗ್ಗೆ ತಕ್ಷಣವೇ ಬಳಕೆದಾರರು ಅರ್ಥಮಾಡಿಕೊಳ್ಳುವುದು ಸುಲಭವಾಗುವಂತೆ ಫೇಸ್‌ಬುಕ್ ಈ ಅಧಿಸೂಚನೆಗಳನ್ನು (ನೋಟಿಫಿಕೇಶನ್) ಮರುವಿನ್ಯಾಸಗೊಳಿಸಿದೆ.
ಇದನ್ನೂ ಓದಿ: ಹೊಸ ಐಟಿ ನೀತಿಗಳ ಅನುಷ್ಠಾನದ ಮಾಹಿತಿ ತಕ್ಷಣವೇ ಹಂಚಿಕೊಳ್ಳುವಂತೆ ಸೋಷಿಯಲ್ ಮೀಡಿಯಾಗಳಿಗೆ ಕೇಂದ್ರದ ತಾಕೀತು
ಡಿಜಿಟಲ್ ಕಂಟೆಂಟ್ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ನಿಯಮಗಳನ್ನು ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳು ಇನ್ನೂ ಅನುಸರಿಸಿರಲಿಲ್ಲ. ಹೀಗಾಗಿ, ಸರ್ಕಾರದ ನೀತಿ ಸಂಹಿತೆ ಪಾಲಿಸದಿದ್ದರೆ ಸೋಷಿಯಲ್ ಮೀಡಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಮೇ 25 ವರೆಗೆ ಗಡುವು ನೀಡಿತ್ತು. ಗಡುವು ಮುಕ್ತಾಯವಾಗುವ ಮೊದಲೇ ಫೇಸ್‌ಬುಕ್ , ನಾವು ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ನಿಬಂಧನೆಗಳನ್ನು ಪಾಲಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿ ಪಾರಾಗಿತ್ತು.
![Facebook to push down all posts from users who share misinformation](https://etvbharatimages.akamaized.net/etvbharat/prod-images/11915099_facebook.jpg)
ಹೊಸ ಡಿಜಿಟಲ್ ನಿಯಮಗಳ ಅನುಸರಣೆಯ ಸ್ಥಿತಿಗತಿಯನ್ನು ಈ ತಕ್ಷಣವೇ ಹಂಚಿಕೊಂಡು ವರದಿ ನೀಡುವಂತೆ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕೇಂದ್ರ ಸರ್ಕಾರ ತಾಕೀತು ಮಾಡಿದ್ದು, ಇದೀಗ ಫೇಸ್‌ಬುಕ್ ತಪ್ಪು ಮಾಹಿತಿಯುಳ್ಳ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.