ವಾಷಿಂಗ್ಟನ್ (ಯು.ಸ್): ಭಾರತ ಸರ್ಕಾರವು ಅಂಗೀಕರಿಸಿದ ಕೃಷಿ ಮಸೂದೆಗಳು ಕೃಷಿ ಸುಧಾರಣೆಗೆ ಸಹಕಾರಿಯಾಗಲಿವೆ ಎಂಬ ಅಭಿಪ್ರಾಯವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೊಂದಿದೆ ಎಂದು ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.
ಆದರೂ ಈ ಹೊಸ ವ್ಯವಸ್ಥೆ ಪ್ರತಿಕೂಲ ಪರಿಣಾಮ ಬೀರದಂತೆ ಸಾಮಾಜಿಕ ಸುರಕ್ಷತಾ ಜಾಲವನ್ನು ಬಲಪಡಿಸುವ ಅವಶ್ಯಕತೆಯಿದೆ ಎಂದು ಐಎಂಎಫ್‌ನ ಸಂವಹನ ನಿರ್ದೇಶಕ ಗೆರ್ರಿ ರೈಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
"ಕೃಷಿ ಮಸೂದೆಗಳು ಭಾರತದಲ್ಲಿ ಕೃಷಿ ಸುಧಾರಣೆಗಳಿಗಾಗಿ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುವುದು ನಮ್ಮ ಅಭಿಪ್ರಾಯ" ಎಂದು ರೈಸ್ ಹೇಳಿದರು.
"ಈ ಕ್ರಮಗಳು ರೈತರಿಗೆ ನೇರವಾಗಿ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು, ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡುವ ಮೂಲಕ ಹೆಚ್ಚುವರಿ ಮೊತ್ತವನ್ನು ಉಳಿಸಿಕೊಳ್ಳಲು ರೈತರಿಗೆ ಅನುವು ಮಾಡಿಕೊಡುತ್ತದೆ, ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮೀಣ ಬೆಳವಣಿಗೆಯನ್ನು ಬೆಂಬಲಿಸುತ್ತದೆ" ಎಂದು ಅವರು ಹೇಳಿದರು.