ಪುಣೆ (ಮಹಾರಾಷ್ಟ್ರ): ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧದಿಂದ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಪೆಟ್ರೋಲಿಯಂ ಬೆಲೆ ಜಾಗತಿಕವಾಗಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ದೇಶದ ಜನ ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಭಾರತ ಉಕ್ರೇನ್ ಮತ್ತು ರಷ್ಯಾದಿಂದ ಸೂರ್ಯಕಾಂತಿ ಎಣ್ಣೆ ಆಮದು ನಿಲ್ಲಿಸಿರುವುದರಿಂದ ಖಾದ್ಯ ತೈಲದ ಬೆಲೆ ಗಗನಕ್ಕೇರಿದೆ.
ಈ ಬಗ್ಗೆ ಮಾತನಾಡಿರುವ ಪೂನಾ ಮರ್ಚೆಂಟ್ಸ್ ಚೇಂಬರ್‌ನ ನಿರ್ದೇಶಕ ಕನ್ಹಯ್ಯಾ ಲಾಲ್, ತೈಲ ಬೆಲೆ 15 ಕೆಜಿ ಕಂಟೇನರ್‌ಗೆ ಸುಮಾರು 300 ರಿಂದ 400 ರೂ.ಗಳಷ್ಟು ಹೆಚ್ಚಾಗಿದೆ. ಆಮದು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಕೊರತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ತೈಲದ ಕೊರತೆ ಇದ್ದು, ಅದರಲ್ಲೂ ಸೂರ್ಯಕಾಂತಿ ಎಣ್ಣೆಯ ದರ 15 ಕೆ.ಜಿ ಕಂಟೇನರ್‌ಗೆ ಸುಮಾರು 600 ರೂಪಾಯಿ ಏರಿಕೆಯಾಗಿದ್ದು, ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಮತ್ತೊಬ್ಬ ವ್ಯಾಪಾರಿ ಹೇಳಿದ್ದಾರೆ.
ಸೂರ್ಯಕಾಂತಿ ಎಣ್ಣೆಯನ್ನು ಭಾರತದಲ್ಲಿ ಮುಖ್ಯವಾಗಿ ಉಕ್ರೇನ್ ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಎರಡೂ ರಾಷ್ಟ್ರಗಳ ನಡುವೆ ಯುದ್ಧ ಪ್ರಾರಂಭವಾಗುವ ಮೊದಲು ಸೋಯಾಬೀನ್ ಎಣ್ಣೆಯು ಸುಮಾರು 1950 ರೂ.ಗೆ ಮಾರಾಟವಾಗುತ್ತಿತ್ತು. ಅದರ ಬೆಲೆ ಈಗ 2,500 ರೂ.ಗೆ ಏರಿಕೆಯಾಗಿದೆ. ಆದರೆ, ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆ ಈ ಹಿಂದೆ 2,150 ರೂ.ಗೆ ಇದ್ದದ್ದು ಈಗ ಅದು 2,750 ರೂ.ಗಳನ್ನೂ ದಾಟಿ ಮುನ್ನುಗ್ಗುತ್ತಿದೆ.
ರಷ್ಯಾ- ಉಕ್ರೇನ್ ಯುದ್ಧ ನಿಲ್ಲುವವರೆಗೂ ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ ಆಗುವ ಸಾಧ್ಯತೆಗಳು ಕಡಿಮೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಇದೇ ಕಾರಣದಿಂದ ಕೆಲ ವ್ಯಾಪಾರಿಗಳು ಅಡುಗೆ ಎಣ್ಣೆ ಸಂಗ್ರಹದಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
ಇದನ್ನು ಓದಿ:ಜಮ್ಮು-ಕಾಶ್ಮೀರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್