ನವದೆಹಲಿ: ಸಂದೇಸರ ಸಹೋದರರ ಬ್ಯಾಂಕ್ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣ ಸಂಬಂಧ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ನಿವಾಸದಲ್ಲಿ ಗುರುವಾರ ಇಡಿ ನಾಲ್ಕನೇ ಸುತ್ತಿನ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಾಯತ್ತ ತನಿಖಾ ಏಜೆನ್ಸಿಯ ಮೂವರು ಅಧಿಕಾರಿಗಳ ತಂಡವು ರಾಜ್ಯಸಭಾ ಸಂಸದರ 23, ಮದರ್ ತೆರೇಸಾ ಕ್ರೆಸೆಂಟ್ ನಿವಾಸದಲ್ಲಿ ಬೆಳಗ್ಗೆ 11ರ ಸುಮಾರಿಗೆ ತಲುಪಿ ತೀವ್ರ ವಿಚಾರಣೆ ನಡೆಸಿತು.
ಪ್ರಕರಣದ ಸಂಬಂಧ ಜುಲೈ 2ರಂದು ಇಡಿ ತಂಡ 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು. ಮೂರು ಅವಧಿಯಲ್ಲಿ ಅಧಿಕಾರಿಗಳು 128 ಪ್ರಶ್ನೆಗಳನ್ನು ಕೇಳಿದ್ದರು.
ಇದೊಂದು ರಾಜಕೀಯ ಪ್ರೇರೇಪಿತ ನಡೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಯಾರ ಒತ್ತಡದ ಮೇಲೆ ಅವರೆಲ್ಲ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲವೆಂದು ಅಹ್ಮದ್ ಪಟೇಲ್ ಹೇಳಿದ್ದಾರೆ.
ಸಂದೇಸರ ಸಹೋದರ ಜತೆಗಿನ ಮತ್ತು ಸ್ಟರ್ಲಿಂಗ್ ಬಯೋಟೆಕ್ ಫಾರ್ಮಾಸ್ಯುಟಿಕಲ್ ಕಂಪನಿಯೊಂದಿಗಿನ ಸಂಬಂಧ ಮತ್ತು ಈ ಪ್ರಕರಣದಲ್ಲಿ ಅಹ್ಮದ್ ಕುಟುಂಬಸ್ಥರ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಜೂನ್ 27, ಜೂನ್ 30 ಮತ್ತು ಜುಲೈ 2ರಂದು ನಡೆದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಖಜಾಂಚಿ ಸುಮಾರು 27 ಗಂಟೆಗಳ ಕಾಲ ಇಡಿಯ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಭೇಟಿ ನೀಡಲು ನಿರಾಕರಿಸಿದ ನಂತರ ಪಟೇಲ್ ಅವರನ್ನು ಮನೆಯಲ್ಲಿಯೇ ಪ್ರಶ್ನಿಸುವ ಅವಕಾಶ ನೀಡಲಾಯಿತು. ಹಿರಿಯ ನಾಗರಿಕರು ಹೊರಗೆ ಹೋಗುವುದನ್ನು ತಡೆಯಲು ಕೋವಿಡ್-19 ಮಾರ್ಗಸೂಚಿ ಅನ್ವಯ ವಿನಾಯ್ತಿ ನೀಡಲಾಗಿದೆ.