ನವದೆಹಲಿ : ದೇಶದಲ್ಲಿ ಹದಗೆಟ್ಟಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ಮುಂದಿನ ಸೂಚನೆ ಬರುವವರೆಗೂ ಭಾರತದಿಂದ ಬರುವ ಎಲ್ಲಾ ನೇರ ವಾಣಿಜ್ಯ ವಿಮಾನಗಳನ್ನು ಕುವೈತ್ ಶನಿವಾರ ಸ್ಥಗಿತಗೊಳಿಸಿದೆ.
ಆರೋಗ್ಯ ಅಧಿಕಾರಿಗಳ ಸೂಚನೆಯ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ಏಪ್ರಿಲ್ 24ರಿಂದ ಜಾರಿಗೆ ಬರುವಂತೆ ಭಾರತದಿಂದ ಆಗಮಿಸುವ ಎಲ್ಲಾ ನೇರ ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಕುವೈತ್ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಭಾರತದಿಂದ ನೇರವಾಗಿ ಅಥವಾ ಬೇರೆ ದೇಶದ ಮೂಲಕ ಬರುವ ಎಲ್ಲಾ ಪ್ರಯಾಣಿಕರನ್ನು ಭಾರತದಿಂದ ಕನಿಷ್ಠ 14 ದಿನಗಳನ್ನು ಕಳೆಯದ ಹೊರತು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು ಟ್ವಿಟರ್‌ನಲ್ಲಿ ಹೇಳಿದೆ.
ಕುವೈತ್ ನಾಗರಿಕರು, ಸಂಬಂಧಿಕರು ಮತ್ತು ಅವರ ಮನೆಯ ಕೆಲಸಗಾರರಿಗೆ ದೇಶ ಪ್ರವೇಶಿಸಲು ಅವಕಾಶ ನೀಡಲಾಗುವುದು. ಸರಕು ಹಾರಾಟದ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದೆ.
ಕುವೈತ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ದೇಶದ ಅತಿದೊಡ್ಡ ವಲಸಿಗ ಸಮುದಾಯವಾದ ಕುವೈತ್‌ನಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಭಾರತೀಯ ಸಮುದಾಯ ವಾಸಿಸುತ್ತಿದೆ. ಈ ಹಿಂದೆ, ಇಂಗ್ಲೆಂಡ್, ಯುಎಇ ಮತ್ತು ಕೆನಡಾ ಸಹ ಭಾರತದಲ್ಲಿನ ಆತಂಕಕಾರಿ ಕೋವಿಡ್ -19 ಪರಿಸ್ಥಿತಿಯಿಂದಾಗಿ ವಿಮಾನಯಾನ ನಿಷೇಧ ಘೋಷಿಸಿತ್ತು.
ದಾಖಲೆಯ ಏಕದಿನ 3,46,786 ಕೊರೊನಾವೈರಸ್ ಪ್ರಕರಣಗಳು ಭಾರತದ ಸೋಂಕಿನ ಪ್ರಮಾಣವನ್ನು 1,66,10,481 ಕ್ಕೆ ತಳ್ಳಿದೆ. ಆದರೆ, ಸಕ್ರಿಯ ಪ್ರಕರಣಗಳು 25 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ- ಅಂಶಗಳು ಶನಿವಾರ ನವೀಕರಿಸಿದೆ.