ನವದೆಹಲಿ: ಸರ್ಕಾರಿ ಸ್ವಾಮಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್ನ (ಎಂಟಿಎನ್ಎಲ್) ಟೆಲಿಕಾಂ ಸೇವೆಗಳನ್ನು ಬಳಸಲು ಕೇಂದ್ರ ಸರ್ಕಾರವು ಎಲ್ಲ ಸಚಿವಾಲಯ, ಸಾರ್ವಜನಿಕ ಇಲಾಖೆ ಮತ್ತು ಸಾರ್ವಜನಿಕ ವಲಯದ ಘಟಕಗಳಿಗೆ ಕಡ್ಡಾಯಗೊಳಿಸಿದೆ.
ಕೇಂದ್ರ ಸರ್ಕಾರವು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಾಮರ್ಥ್ಯವನ್ನು ಸರ್ಕಾರದ ಎಲ್ಲಾ ಸಚಿವಾಲಯ/ ಇಲಾಖೆ, ಸಿಪಿಎಸ್ಇ, ಕೇಂದ್ರ ಸ್ವಾಯತ್ತ ಸಂಸ್ಥೆಗಳು ಕಡ್ಡಾಯವಾಗಿ ಬಳಸಿಕೊಳ್ಳಲು ಅನುಮೋದಿಸಿದೆ ಎಂದು ದೂರಸಂಪರ್ಕ ಇಲಾಖೆ (ಡಿಒಟಿ) ಹೊರಡಿಸಿದ ಜ್ಞಾಪಕ ಪತ್ರದಲ್ಲಿ ತಿಳಿಸಿದೆ.
ಹಣಕಾಸು ಸಚಿವಾಲಯದ ಸಮಾಲೋಚನೆಯ ನಂತರ ಅಕ್ಟೋಬರ್ 12ರ ಜ್ಞಾಪಕ ಪತ್ರವನ್ನು ಕೇಂದ್ರದ ಅಡಿ ಬರುವ ಎಲ್ಲ ಕಾರ್ಯದರ್ಶಿ ಮತ್ತು ಇಲಾಖೆಗಳಿಗೆ ನೀಡಲಾಯಿತು. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಟೆಲಿಕಾಂ ಸೇವೆಯ ಬಳಕೆಯನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕ್ಯಾಬಿನೆಟ್ ತೆಗೆದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ಎಲ್ಲ ಸಚಿವಾಲಯ / ಇಲಾಖೆಗಳು ಅಂತರ್ಜಾಲ / ಬ್ರಾಡ್‌ಬ್ಯಾಂಡ್, ಲ್ಯಾಂಡ್‌ಲೈನ್ ಮತ್ತು ಗುತ್ತಿಗೆ ಆಧಾರಿತ ಸೇವೆಗಳಿಗೆ ಬಿಎಸ್‌ಎನ್‌ಎಲ್ / ಎಂಟಿಎನ್ಎಲ್ ನೆಟ್‌ವರ್ಕ್ ಅನ್ನು ಕಡ್ಡಾಯವಾಗಿ ಬಳಸಬೇಕು. ತಮ್ಮ ನಿಯಂತ್ರಣದಲ್ಲಿರುವ ಸಿಪಿಎಸ್‌ಇ / ಕೇಂದ್ರ ಸ್ವಾಯತ್ತ ಸಂಸ್ಥೆಗಳು ಸೇರಿದಂತೆ ಅಗತ್ಯ ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ ಎಂದು ಡಿಒಟಿ ಪತ್ರದಲ್ಲಿ ಸೂಚಿಸಿದೆ.
ತಮ್ಮ ವೈರ್‌ಲೈನ್ ಚಂದಾದಾರರ ನೆಲೆ ಕಳೆದುಕೊಂಡು ನಷ್ಟಕ್ಕೆ ಒಳಗಾಗುತ್ತಿರುವ ದೂರಸಂಪರ್ಕ ಸಂಸ್ಥೆಗಳಿಗೆ ಈ ಆದೇಶವು ಪರಿಹಾರವಾಗಿದೆ. 2019-20ರಲ್ಲಿ ಬಿಎಸ್‌ಎನ್‌ಎಲ್ 15,500 ಕೋಟಿ ರೂ. ಹಾಗೂ ಎಂಟಿಎನ್‌ಎಲ್ 3,694 ಕೋಟಿ ರೂ. ನಷ್ಟ ಕಂಡಿದೆ.
ಬಿಎಸ್‌ಎನ್‌ಎಲ್‌ನ ವೈರ್‌ಲೈನ್ ಚಂದಾದಾರರ ಸಂಖ್ಯೆ 2008ರ ನವೆಂಬರ್‌ನಲ್ಲಿ 2.9 ಕೋಟಿಯಿಂದ ಈ ವರ್ಷದ ಜುಲೈನಲ್ಲಿ 80 ಲಕ್ಷಕ್ಕೆ ಇಳಿದಿದೆ. ಎಂಟಿಎನ್‌ಎಲ್‌ನ ಸ್ಥಿರ ಗ್ರಾಹಕರು 2008ರ ನವೆಂಬರ್‌ನಲ್ಲಿ 35.4 ಲಕ್ಷದಿಂದ ಈ ವರ್ಷ ಜುಲೈನಲ್ಲಿ 30.7 ಲಕ್ಷಕ್ಕೆ ಕುಸಿದಿದೆ.
ಬಿಎಸ್‌ಎನ್‌ಎಲ್ ತನ್ನ ನೆಟ್‌ವರ್ಕ್ ಜಾಲ ವಿಸ್ತರಿಸಲು ಮತ್ತು ಕಾರ್ಯಾಚರಣೆಯ ವೆಚ್ಚ ನಿರ್ವಹಿಸಲು ಸಾವರಿನ್ ಗ್ಯಾರಂಟಿ ಬಾಂಡ್‌ಗಳ ಮೂಲಕ 8,500 ಕೋಟಿ ರೂ. ಘೋಷಿಸಲಾಗಿದೆ. ಎಂಟಿಎನ್ಎಲ್ ತನ್ನ ಪುನರುಜ್ಜೀವನ ಪ್ಯಾಕೇಜಿನ ಭಾಗವಾಗಿ 2019ರ ಅಕ್ಟೋಬರ್‌ನಲ್ಲಿ ಕ್ಯಾಬಿನೆಟ್ 6,500 ಕೋಟಿ ರೂ. ಸಾವರಿನ ಬಾಂಡ್‌ಗೆ ಅನುಮೋದಿಸಿದೆ.