ನವದೆಹಲಿ: ಈಗಾಗಲೇ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧರಿಸಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT), ಇನ್ನೊಂದು ಬೇಡಿಕೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಮುಂದಿಟ್ಟಿದೆ.
ಪ್ರತಿ ಇ-ಕಾಮರ್ಸ್ ಪೋರ್ಟಲ್‌ಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಪ್ರತಿಯೊಂದು ಉತ್ಪನ್ನದ ಮೇಲೆ 'ಕಂಟ್ರಿ ಆಫ್ ಒರಿಜಿನ್' (ಯಾವ ದೇಶದ ಉತ್ನನ್ನವೋ ಆ ದೇಶದ ಹೆಸರು) ಅನ್ನು ಕಡ್ಡಾಯವಾಗಿ ನಮೂದಿಸುವಂತೆ ನಿರ್ದೇಶನ ನೀಡುವಂತೆ ಸಚಿವರಿಗೆ ಸಿಎಐಟಿ ಆಗ್ರಹಿಸಿದೆ.
ಇ-ಕಾಮರ್ಸ್ ಪೋರ್ಟಲ್‌ಗಳು ಹೆಚ್ಚಾಗಿ ಚೀನಾದ ವಸ್ತುಗಳನ್ನು ಮಾರಾಟ ಮಾಡುತ್ತಿವೆ. ಇದರ ಬಗ್ಗೆ ಗ್ರಾಹಕರಿಗೆ ತಿಳಿದಿಲ್ಲ. ಇದು ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಮಾತ್ರ ಸಂಬಂಧಪಟ್ಟಿಲ್ಲ. ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಹಾಗೂ ಸ್ಥಳೀಯ, ದೇಶೀಯ ಉತ್ನನ್ನಗಳ ಕುರಿತು ಗ್ರಾಹಕರಿಗೆ ಮಾಹಿತಿಯಿದ್ದರೆ ಒಳಿತು. ಹೀಗಾಗಿ ಆಯಾ ವಸ್ತುಗಳ ಮೇಲೆ ಅದು ಯಾವ ದೇಶದ ಉತ್ಪನ್ನ ಎಂದು ನಮೂನಿಸಿದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಎಫ್‌ಡಿಐ ನೀತಿಯನ್ನು ತಿದ್ದುಪಡಿ ಮಾಡಲು ನಾನು ಸಚಿವರನ್ನು ಕೇಳಿದ್ದೇನೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ಬಳಿಕ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಲು ಅಭಿಯಾನ ಆರಂಭಿಸಿರುವ CAIT, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜಕೀಯ ಪಕ್ಷಗಳಿಗೆ ತಮ್ಮ ಕ್ಯಾಂಪೇನ್ಗೆ ಕೈ ಜೋಡಿಸುವಂತೆ ಆಗ್ರಹಿಸಿದೆ. ಅಲ್ಲದೇ ವಿವೊ ಸೇರಿದಂತೆ ಇತರ ಚೀನೀ ಕಂಪನಿಯ ಪ್ರಾಯೋಜಕತ್ವವನ್ನು ರದ್ದುಗೊಳಿಸಬೇಕೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ)ಗೆ ಕೂಡ ಒತ್ತಾಯಿಸಿದೆ.