ನವದೆಹಲಿ: ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನದ ಭಾಗವಾಗಿ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ದೇಶ ಕಾಯುತ್ತಿರುವ ಭಾರತೀಯ ಸೈನಿಕರಿಗಾಗಿ ಮಹಿಳಾ ಉದ್ಯಮಿಗಳು ವಿನ್ಯಾಸಗೊಳಿಸಿರುವ ರಾಖಿಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವರ್ತಕರ ಒಕ್ಕೂಟ ಹಸ್ತಾಂತರಿಸಿದೆ.
ರಾಜನಾಥ್ ಸಿಂಗ್ ಅವರಿಗೆ 10 ಸಾವಿರಕ್ಕೂ ಅಧಿಕ ರಾಖಿಗಳನ್ನು ಹಸ್ತಾಂತರಿಸಲಾಗಿದೆ. ದೆಹಲಿಯಲ್ಲಿ ತಯಾರಿಸಿದ 'ಮೋದಿ ರಾಖಿ' ಕೂಡ ಇದರಲ್ಲಿ ಸೇರಿದೆ. ನಾಗ್ಪುರದ ಸೆಣಬಿನ ರಾಖಿ, ಜೈಪುರದ ಪೇಂಟ್ ರಾಖಿ, ಪುಣೆಯಲ್ಲಿ ಮಾಡಿದ ಬೀಜ ರಾಖಿ, ಸತ್ನಾದಲ್ಲಿ ತಯಾರಿಸಿದ ಉಣ್ಣೆ ರಾಖಿ, ಜಮ್ಖಾಂಡ್ಪುರದ ಬುಡಕಟ್ಟು ವಸ್ತುಗಳಿಂದ ತಯಾರಿಸಿದ ಜಾರ್ಖಂಡ್ ರಾಖಿ, ಅಸ್ಸೋಂನ ತಿನ್ಸುಕಿಯಾದಲ್ಲಿ ತಯಾರಿಸಿದ ಚಹಾ ಎಲೆಗಳ ರಾಖಿ, ಕೋಲ್ಕತ್ತಾದಲ್ಲಿ ಚಹಾ ಎಲೆಗಳ ರಾಖಿ, ಸಿಲ್ಕ್ ರಾಖಿ, ಮುಂಬೈನಲ್ಲಿ ತಯಾರಿಸಿದ ಫ್ಯಾಷನ್ ರಾಖಿ ಇದರಲ್ಲಿ ಸೇರಿವೆ ಎಂದು ಸಿಎಐಟಿ ತಿಳಿಸಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ವಿವಿಧ ರಾಜ್ಯಗಳ ಮಹಿಳಾ ಉದ್ಯಮಿಗಳು ಭಾರತೀಯ ಸರಕುಗಳನ್ನು ಬಳಸುವ ಮೂಲಕ ಲಕ್ಷಾಂತರ ರಾಖಿಗಳನ್ನು ಮಾಡಿದ್ದಾರೆ. ಈ ರಾಖಿಗಳನ್ನು ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ವ್ಯಾಪಾರ ಸಂಘಗಳ ಮೂಲಕ ವಿತರಿಸಲಾಗುವುದು ಎಂದು ಹೇಳಿದರು.