ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್), ಏರ್ ಇಂಡಿಯಾ ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ಸತತ ಮೂರನೇ ವರ್ಷವೂ ಅತಿಹೆಚ್ಚು ನಷ್ಟ ಅನುಭವಿಸಿವೆ.
ಒಎನ್ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಎನ್ಟಿಪಿಸಿನಂತಹ ಕೇಂದ್ರೋದ್ಯಮಗಳು 2018-19ರ ಸಾಲಿನಲ್ಲಿ ಲಾಭ ಗಳಿಸಿವೆ ಎಂದು ಸಾರ್ವಜನಿಕ ಉದ್ದಿಮಗಳ ಇಲಾಖೆ, ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯ ಪ್ರತಿ ವರ್ಷವೂ ಜಂಟಿಯಾಗಿ ತಯಾರಿಸುವ ಕೇಂದ್ರೋದ್ಯಮಗಳ ಹಣಕಾಸು ಸಾಧನೆಗೆ ಸಂಬಂಧಿಸಿದ ಮಾಹಿತಿಯಿಂದ ತಿಳಿದುಬಂದಿದೆ.
ನಷ್ಟದಲ್ಲಿರುವ ಒಟ್ಟಾರೆ 70 ಕಂಪನಿಗಳಲ್ಲಿ 10 ಕಂಪನಿಗಳ ನಷ್ಟದ ಪ್ರಮಾಣವೇ ಶೇ 97.04ರಷ್ಟು ಇದೆ. ಆದಾಯ ಗಳಿಸಿರುವ ಒಎನ್ಜಿಸಿ, ಇಂಡಿಯನ್ ಆಯಿಲ್ ಮತ್ತು ಎನ್ಟಿಪಿಸಿ ಕ್ರಮವಾಗಿ ಶೇ 15.3ರಷ್ಟು, ಶೇ 9.68ರಷ್ಟು ಹಾಗೂ 6.73ರಷ್ಟು ಲಾಭಾಂಶ ಮಾಡಿಕೊಂಡಿವೆ ಎಂದು ಹೇಳಿದೆ.
ಎಕ್ಸಿಸ್, ಕಸ್ಟಮ್ಸ್ ಸುಂಕ, ಜಿಎಸ್ಟಿ, ಕಾರ್ಪೊರೇಟ್ ತೆರಿಗೆ, ಲಾಭಾಂಶ, ಸಾಲದ ಮೆಲಿನ ಬಡ್ಡಿದರ ಮತ್ತು ಇತರೆ ಸುಂಕ ಮತ್ತು ತೆರಿಗೆಗಳಿಂದ ಸರ್ಕಾರದ ಬೊಕ್ಕಸಕ್ಕೆ 2018-19ರಲ್ಲಿ ₹ 3,68,803 ಬಂದಿದೆ. 2017-18ರಲ್ಲಿ ₹ 3,52,361 ಕೋಟಿ ಬಂದಿತ್ತು. ಇದಕ್ಕೆ ಹೋಲಿಸಿದರೆ ಆದಾಯದ ಮೊತ್ತ ಶೇ 4.67ರಷ್ಟು ಏರಿಕೆಯಾಗಿದೆ.
ಕೇಂದ್ರೋದ್ಯಮಗಳ ಮಾಹಿತಿಯಲ್ಲಿ 348 ಕಂಪನಿಗಳಿವೆ. ಇದರಲ್ಲಿ 249 ಕಾರ್ಯಚರಣೆ ನಡೆಸುತ್ತಿವೆ. 86 ನಿರ್ಮಾಣ ಹಂತದಲ್ಲಿವೆ. 13 ಮುಚ್ಚುವ ಹಂತದಲ್ಲಿವೆ ಎಂದು ತಿಳಿಸಿದೆ.