ನವದೆಹಲಿ: ಚೀನಾದ ಉತ್ಪನ್ನಗಳ ಬಹಿಷ್ಕಾರದ ಕೂಗು ಕೇಳಿ ಬರುತ್ತಿದ್ದು, ಭಾರತವು ತನ್ನ ಸರಬರಾಜು ಸರಪಳಿಯನ್ನು ಸದೃಢವಾಗಿ ಜಾರಿಗೆ ತರಬೇಕಾದ ಅಗತ್ಯ ಇರುವುದರಿಂದ ಆ ದೇಶದಿಂದ ಆಮದಿನ ಮೇಲೆ ತಕ್ಷಣದ ನಿರ್ಬಂಧವು ಕಾರ್ಯಸಾಧ್ಯವಾಗುವುದಿಲ್ಲ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ) ಅಭಿಪ್ರಾಯಪಟ್ಟಿದೆ.
ಮಾಧ್ಯಮಗಳೊಂದಿಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಎಫ್‌ಐಇಒ ಅಧ್ಯಕ್ಷ ಎಸ್.ಕೆ. ಸರಫ್ ಮಾತನಾಡಿ, ಚೀನಾದ ಸರಕುಗಳ ಆಮದನ್ನು ನಿಷೇಧಿಸುವಾಗ ಅಥವಾ ನಿರ್ಬಂಧಿಸುವಾಗ ಭಾರತ ಜಾಗರೂಕರಾಗಿರಬೇಕು ಎಂದರು.
ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ದೇಶವು ತನ್ನ ಪೂರೈಕೆ ಸರಪಳಿ ಮೂಲಸೌಕರ್ಯ ಸುಧಾರಿಸಬೇಕಾಗಿದೆ ಎಂದು ಎಫ್‌ಐಇಒ ಮಹಾನಿರ್ದೇಶಕ ಅಜಯ್ ಸಹೈ ಅಭಿಪ್ರಾಯಪಟ್ಟರು.
ಉತ್ಪಾದನಾ ಸನ್ನಿವೇಶ ಬಲಪಡಿಸುವ ಸಲುವಾಗಿ ದೇಶದಲ್ಲಿ ವ್ಯವಹಾರಗಳನ್ನು ಸುಲಭಗೊಳಿಸಲು ಪ್ರಮುಖ ಅವಶ್ಯಕತೆಯಿದೆ ಎಂದರು.
ರಫ್ತು ದೃಷ್ಟಿಕೋನದಲ್ಲಿ ನೋಡುವುದಾದರೇ ಈ ಹಣಕಾಸು ವರ್ಷದಲ್ಲಿ ಭಾರತದಿಂದ ರಫ್ತು ಶೇ 10ರಷ್ಟು ಇಳಿಕೆಯಾಗಬಹುದು ಎಂದು ಎಫ್‌ಐಇಒ ಹೇಳಿದೆ.
ಚೀನಾ ವಿರೋಧಿ ಭಾವನೆಗಳು ಹೆಚ್ಚಿರುವ ದೇಶಗಳಿಂದ ಭಾರತೀಯ ರಫ್ತುದಾರರು ಸಾಕಷ್ಟು ವಿಚಾರಣೆಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಎಲ್ಲ ವಿಚಾರಣೆಗಳನ್ನು ಆರ್ಡರ್ಗಳಾಗಿ ಪರಿವರ್ತಿಸಲಾಗಿದೆ ಎಂದು ಎಫ್‌ಐಇಒ ಪ್ರಕಟಣೆಯಲ್ಲಿ ತಿಳಿಸಿದೆ.