ನವದೆಹಲಿ: ಭಾರತದ ಸ್ವದೇಶಿ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಭೀಮ್ (ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಅನ್ನು ನೆರೆಯ ದೇಶ ಭೂತಾನ್ ಅಳವಡಿಸಿಕೊಂಡಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಭೂತಾನ್ ನಿಯೋಗ ಜಂಟಿಯಾಗಿ ಈ ಸೇವೆಗೆ ಚಾಲನೆ ನೀಡಿದರು.
ಮೊಬೈಲ್ ಸಂಖ್ಯೆಗಳನ್ನು ಬಳಸಿ ಇಬ್ಬರು ಹಣಕಾಸಿನ ವಹಿವಾಟು ನಡೆಸಲು ಭೀಮ್ ಯುಪಿಐ ಉತ್ತಮ ವೇದಿಕೆಯಾಗಿದೆ. ಪ್ರತಿ ವರ್ಷ ಭೂತಾನ್ ಪ್ರವಾಸ ಕೈಗೊಳ್ಳುವ 2 ಲಕ್ಷಕ್ಕಿಂತ ಅಧಿಕ ಭಾರತೀಯ ಪ್ರವಾಸಿಗರಿಗೆ ಈ ಸೌಲಭ್ಯ ಅನುಕೂಲವಾಗಲಿದೆ.
ಭೂತಾನ್‌ನಲ್ಲಿಂದು ಆರಂಭಿಸಿರುವ ಭೀಮ್-ಯುಪಿಐ ಸೇವೆ ಉಭಯ ದೇಶಗಳ ಪಾವತಿಯ ಮೂಲಸೌಕರ್ಯಗಳ ಸಂಪರ್ಕ ಕೊಂಡಿಯಾಗಿದೆ. ಪ್ರತಿವರ್ಷ ಭೂತಾನ್‌ಗೆ ಪ್ರಯಾಣಿಸುವ ಭಾರತದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ಈ ಸೇವೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇದೇ ವೇಳೆ ಅವರು, ಭೂತಾನ್‌ನ ಸ್ಥಳೀಯ ಸಮುದಾಯದವರು ಉತ್ಪಾದಿಸಿದ್ದ ಸಾವಯವ ತಾಜಾ ಕೃಷಿ ಉತ್ಪನ್ನಗಳನ್ನು ಖರೀದಿಸಲು ಭೀಮ್-ಯುಪಿಐ ಮೂಲಕ ನೇರ ವಹಿವಾಟು ನಡೆಸಿದರು.
ಇದನ್ನೂ ಓದಿ: ಬೆಟ್ಟ-ಗುಡ್ಡ ಅಲೆದಾಡಿದ್ರೂ ಸಿಗ್ತಿಲ್ಲ ನೆಟ್ವರ್ಕ್, ಆನ್ಲೈನ್ ತರಗತಿ ಕೇಳಲಾಗದೇ ವಿದ್ಯಾರ್ಥಿಗಳ ಸಂಕಟ
ಭಾರತ ಮತ್ತು ಭೂತಾನ್ ಈಗಾಗಲೇ ಎರಡು ಹಂತಗಳಲ್ಲಿ ರೂಪೆ ಕಾರ್ಡ್ ಸೌಲಭ್ಯಗಳನ್ನು ಸಕ್ರಿಯಗೊಳಿಸಿದೆ. ಒಪ್ಪಂದದ ಪ್ರಕಾರ, ಭಾರತದಲ್ಲಿ ನೀಡಲಾಗುವ ರೂಪೆ ಕಾರ್ಡ್‌ಗಳನ್ನು ಮೊದಲ ಹಂತದಲ್ಲಿ ಭೂತಾನ್‌ನಲ್ಲಿ ಸ್ವೀಕರಿಸಲಾಗುತ್ತಿತ್ತು. ನಂತರ ಭೂತಾನ್‌ನಲ್ಲಿ ನೀಡಲಾಗುವ ರೂಪೆ ಕಾರ್ಡ್‌ಗಳನ್ನು ಭಾರತೀಯ ಸಂಸ್ಥೆಗಳಲ್ಲಿ ಸ್ವೀಕರಿಸಲಾಗುತ್ತಿದೆ.
ಕ್ಯೂಆರ್ ಆಧಾರಿದ ಯುಪಿಐ ಸೇವೆಯನ್ನು ಅಳವಡಿಸಿಕೊಂಡ ಮೊದಲ ದೇಶ ಭೂತಾನ್. ಭೀಮ್ ಆ್ಯಪ್ ಮೂಲಕ ಮೊಬೈಲ್ ಆಧಾರಿತ ಪಾವತಿಗಳನ್ನು ಸ್ವೀಕರಿಸಿದ ನೆರೆಯ ದೇಶವಾಗಿದೆ. ವ್ಯಾಪಾರಿ ಸ್ಥಳಗಳಲ್ಲಿ ಭಾರತದ ಭೀಮ್-ಯುಪಿಐ ಅನ್ನು ಸ್ವೀಕರಿಸಲು ಈ ಮೊದಲ ಸಿಂಗಾಪುರ್ ಆರಂಭಿಸಿತ್ತು.