ಹೊಸದಿಲ್ಲಿ: ವೇಗದ ವಿಡಿಯೋ ಸ್ಟ್ರೀಮಿಂಗ್ನಲ್ಲಿ ಏರ್ಟೆಲ್ ನೆಟ್ವರ್ಕ್ ಮುಂಚೂಣಿಯಲ್ಲಿದ್ದು, 4ಜಿ ಸೇವೆ ವ್ಯಾಪಕತೆಯಲ್ಲಿ ರಿಲಯನ್ಸ್ ಜಿಯೊ ಮೊದಲ ಸ್ಥಾನದಲ್ಲಿದೆ ಎಂದು ಟೆಲಿಕಾಂ ತಂತ್ರಜ್ಞಾನ ವಿಶ್ಲೇಷಕ ಸಂಸ್ಥೆ ಓಪನ್ ಸಿಗ್ನಲ್ ತಿಳಿಸಿದೆ. ಡಿಸೆಂಬರ್ನಿಂದ ಫೆಬ್ರವರಿ ಅವಧಿಯ ಟೆಲಿಕಾಂ ಸೇವೆಯ ಗುಣಮಟ್ಟದ ಅಂಕಿ ಅಂಶಗಳನ್ನು ಓಪನ್ ಸಿಗ್ನಲ್ ಪ್ರಕಟಿಸಿದೆ.
"ದೇಶಾದ್ಯಂತ ಏರ್ಟೆಲ್ ಗ್ರಾಹಕರು ವಿಡಿಯೋಗಳನ್ನು ಯಾವುದೇ ಅಡೆತಡೆಯಿಲ್ಲದೇ ನೋಡುತ್ತಿದ್ದಾರೆ. ವಿಡಿಯೋ ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ವಿಡಿಯೋ ಸ್ಟ್ರೀಮಿಂಗ್ ಗುಣಮಟ್ಟಕ್ಕೆ ಪ್ರಾಮುಖ್ಯತೆ ಹೆಚ್ಚಾಗಿದೆ. ಪ್ರಸ್ತುತ ಈ ವಿಭಾಗದಲ್ಲಿ ಏರ್ಟೆಲ್ ಅತ್ಯುತ್ತಮವಾಗಿದೆ." ಎಂದು ಓಪನ್ ಸಿಗ್ನಲ್ನ 'ಇಂಡಿಯಾ ಮೊಬೈಲ್ ನೆಟ್ವರ್ಕ್ ಎಕ್ಸಪೀರಿನ್ಸ್ ರಿಪೋರ್ಟ್-2020' ರಲ್ಲಿ ಹೇಳಲಾಗಿದೆ. 10.1 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗದೊಂದಿಗೆ ಏರ್ಟೆಲ್ ಈ ವಿಭಾಗದಲ್ಲೂ ಮುಂದಿದೆ.
ಉತ್ತಮ ಗುಣಮಟ್ಟದ ಹಾಗೂ ವ್ಯಾಪಕ 4ಜಿ ನೆಟ್ವರ್ಕ್ ಲಭ್ಯತೆಯಲ್ಲಿ ಜಿಯೊ ಮೊದಲ ಸ್ಥಾನದಲ್ಲಿದೆ. ಹಾಗೆಯೇ 3.9 ಎಂಬಿಪಿಎಸ್ ಅಪ್ಲೋಡ್ ವೇಗದೊಂದಿಗೆ ವೊಡಾಫೋನ್ ಐಡಿಯಾ ಅಪ್ಲೋಡ್ ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂದಿದೆ. ವೊಡಾಫೋನ್ ಹಾಗೂ ಐಡಿಯಾ ಈಗಲೂ ಎರಡು ಬ್ರಾಂಡ್ಗಳಡಿ ಕೆಲಸ ಮಾಡುತ್ತಿರುವುದರಿಂದ ಎರಡನ್ನೂ ಬೇರೆ ಬೇರೆಯಾಗಿ ಸಮೀಕ್ಷೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.