ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್ 8ರಂದು ಏಕಾಏಕಿ ಗರಿಷ್ಠ ಮುಖಬೆಲೆಯ ₹ 1,000 ಹಾಗೂ ₹ 500 ನೋಟುಗಳ ರದ್ದತಿ ಬಳಿಕ ಸುಮಾರು 50 ಲಕ್ಷ ಜನ ತಮ್ಮ ಉದ್ಯೋಗ ಕಳೆದು ಕೊಂಡಿದ್ದಾರೆ ಎಂಬ ವರದಿ ಬಹಿರಂಗವಾಗಿದೆ.
ಸೆಂಟರ್ ಫಾಪರ್ ಸಸ್ಟೈನೇಬಲ್ ಎಂಪ್ಲೊಯ್ಮೆಂಟ್ ಅಜೀಮ್ ಪ್ರೇಮ್ಜೀ ವಿಶ್ವವಿದ್ಯಾನಿಲಯದ ಸಂಶೋಧಕರು 'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ' ವರದಿ ತಿಳಿಸಿದೆ. ಈ ಅಧ್ಯಯನವು ಖಾಸಗಿ ಸಂಸ್ಥೆ ಸಿಎಂಐಇ ನೀಡಿದ ಅಂಶಗಳನ್ನು ಒಳಗೊಂಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ನಿರಾಕರಿಸಿದ ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ ಅಂಶಗಳು ಈ ವರದಿಯಲ್ಲಿ ಬಳಸಿಲ್ಲ.
ಡಿಮಾನಿಟೈಸೇಷನ್ ಬಳಿಕ ಉದ್ಯೋಗ ಕುಸಿತ ಆರಂಭವಾಯಿತು. ನೋಟು ರದ್ದತಿಯ ನಡೆಯಿಂದ ಸುಮಾರು 50 ಲಕ್ಷ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. 2018ರಲ್ಲಿ ಭಾರತದ ನಿರುದ್ಯೋಗದ ಪ್ರಮಾಣವು ಶೇ. 6ಕ್ಕೆ ತಲುಪುವ ಮುಖೇನ ಗರಿಷ್ಠ ಮಟ್ಟಕ್ಕೆ ಏರಿದ ದಾಖಲೆ ಸಹ ಆ ವರ್ಷ ಹೊಂದಿತ್ತು. ಇದು 2000- 2010ರ ಈ ಹತ್ತು ವರ್ಷಗಳ ಅವಧಿಯಲ್ಲಿ ದ್ವಿಗುಣಗೊಂಡಿದೆ ಎಂದು ವರದಿ ವಿವರಿಸಿದೆ.
ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ) ಬಿಡುಗಡೆ ಮಾಡಿದ 2017-18ರ ಉದ್ಯೋಗ ಸಮೀಕ್ಷೆಯಲ್ಲಿ ಸಹ ಉದ್ಯೋಗ ನಷ್ಟ 40 ವರ್ಷಗಳಲ್ಲೇ ಅತ್ಯಧಿಕ ಎನಿಸಿಕೊಂಡಿತ್ತು. ಇದುವರೆಗೂ ಅತ್ಯಧಿಕ ಪ್ರಮಾಣದ ಉದ್ಯೋಗ ಕುಸಿತ 1972-73ರ ಅವಧಿಯಲ್ಲಿ ಸಂಭವಿಸಿತ್ತು.
ಪ್ರಧಾನಿಯ ಆ ಒಂದು ಘೋಷಣೆಯಿಂದ ರಾತ್ರೋರಾತ್ರಿ ದೇಶಾದ್ಯಂತ ಚಲಾವಣೆಯಲ್ಲಿದ್ದ ಶೇ.80ರಷ್ಟು ಗರಿಷ್ಠ ಮುಖಬೆಲೆಯ ನೋಟುಗಳು ತಮ್ಮ ಮೌಲ್ಯ ಕಳೆದುಕಂಡವು. ಕಪ್ಪು ಹಣ, ನಕಲಿ ನೋಟು ಹಾವಳಿ ತಡೆ, ಹವಾಲಾ ಹಣ ಬಳಕೆ ನಿಯಂತ್ರಣ, ಉಗ್ರ ಕೃತ್ಯ ಸೇರಿದಂತೆ ಇತರೆ ಕಾರಣಗಳನ್ನು ನೀಡಿ, ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿರೋದಾಗಿ ಸ್ಪಷ್ಟನೆ ನೀಡಿತ್ತು.