ದೆಹಲಿ: ಕೇಂದ್ರ ಬಜೆಟ್ನಲ್ಲಿ ಉನ್ನತ ಶಿಕ್ಷಣ ಹೆಚ್ಚು ಒತ್ತು ನೀಡಲಾಗಿದ್ದು, ಹೊಸ ಶಿಕ್ಷಣ ನೀತಿ ಜಾರಿ ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ದೇಶದಲ್ಲಿ ಉನ್ನತ ಶಿಕ್ಷಣ ದೊರೆಯಬೇಕು ಎಂಬುದನ್ನು ಮನಗೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಮಂಡನೆ ವೇಳೆ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೆಲವು ಮಾಹಿತಿಯನ್ನು ನೀಡಿದ್ದಾರೆ.
ದೇಶದಲ್ಲಿ ಉನ್ನತ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ಇಚ್ಛೆ. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತೆ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ಭಾರತವನ್ನು ಉನ್ನತ ಶಿಕ್ಷಣದ ಹಬ್ ಆಗಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇಲ್ಲಿ ವಿದೇಶಿಯರು ಬಂದು ಶಿಕ್ಷಣ ಪಡೆಯಲು ಉತ್ತೇಜನ ದೊರೆಯುಂತಾಗಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.
ವಿಶ್ವದ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ 3 ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದೆ. ಐದು ವರ್ಷಗಳ ಹಿಂದೆ ಒಂದೇ ಒಂದು ವಿಶ್ವವಿದ್ಯಾಲಯದ ಹೆಸರು ವಿವಿ ಪಟ್ಟಿಯಲ್ಲಿ ಇರಲಿಲ್ಲ. ಇದೀಗ ಐದು ವರ್ಷಗಳಲ್ಲಿ ಟಾಪ್ 200 ಪಟ್ಟಿಯಲ್ಲಿ 3 ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಇದು ಮೋದಿ ಸರ್ಕಾರದ ಕೊಡುಗೆ ಎಂದರು. ಇನ್ನು ಟಾಪ್ 200 ಪಟ್ಟಿಯಲ್ಲಿರುವ 3 ಶಿಕ್ಷಣ ಸಂಸ್ಥೆಗಳ ಸಂಖ್ಯೆ 2020 ವೇಳೆಗೆ ದ್ವಿಗುಣ ಹೊಂದುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿರುವ ಅವರು, ಇದಕ್ಕಾಗಿ ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ ಮಾಡಲು ನಿರ್ಧರಿಸಿದ್ದು, ಗ್ಯಾನ್ ಯೋಜನೆ ಮೂಲಕ ಐಐಎಂ, ಐಐಟಿ ಐಐಎಸ್‌ಸಿ ಜಂಟಿ ಅಧ್ಯಯನ ಮಾಡಲು ಅನುಮತಿ, ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ನಿರ್ಮಾಣಕ್ಕೆ ನಿರ್ಧಾರ, 10 ಲಕ್ಷ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ತಮ್ಮ ಬಜೆಟ್ನಲ್ಲಿ ತಿಳಿಸಿದರು. ಇದೇ ವೇಳೆ, ಐಐಟಿ, ಐಐಎಂ ಸೇರಿದಂತೆ ಉನ್ನತ ಶಿಕ್ಷಣಕ್ಕೆ 400 ಕೋಟಿ ರೂ ಘೋಷಣೆ ಮಾಡಿದರು.