ಬೆಂಗಳೂರು : ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ನೀಡಿರುವ ಶಿಫಾರಸಿನಂತೆ ಬೆಂಗಳೂರಿನ ಅರೆಹಳ್ಳಿ, ಕಾಮಾಕ್ಷಿಪಾಳ್ಯ ಮತ್ತು ತಾವರೆಕೆರೆಗಳನ್ನು ಸರ್ವೇ ಮಾಡಿ, ಗಡಿ ಗುರುತಿಸಿದ ಬಳಿಕ ತಂತಿಬೇಲಿ ನಿರ್ಮಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕೆರೆಗಳ ಸಂರಕ್ಷಣೆಗೆ ಕೋರಿ ಸಿಟಜನ್ ಆ್ಯಕ್ಷನ್ ಗ್ರೂಪ್ ಮತ್ತಿತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠಕ್ಕೆ ಪಾಲಿಕೆ ಈ ಮಾಹಿತಿ ನೀಡಿದೆ.
ಬಿಬಿಎಂಪಿ ಪರ ಹಾಜರಿದ್ದ ವಕೀಲ ನಂಜುಂಡರೆಡ್ಡಿ, ಬಿಬಿಎಂಪಿಯ ಮುಖ್ಯ ಇಂಜಿನಿಯರ್ (ಕೆರೆಗಳು) ಬಿ.ಟಿ. ಮೋಹನ್ ಅವರು ಅರೆಹಳ್ಳಿ, ಕಾಮಾಕ್ಷಿಪಾಳ್ಯ ಮತ್ತು ತಾವರೆಕೆರೆಗಳಿಗೆ ಅಭಿವೃದ್ಧಿ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತ ಪ್ರತ್ಯೇಕ ಪ್ರಮಾಣ ಪತ್ರಗಳನ್ನು ಪೀಠಕ್ಕೆ ಸಲ್ಲಿಸಿದರು. ಅಲ್ಲದೇ, ಅರೆಹಳ್ಳಿ, ತಾವರೆಕೆರೆ ಮತ್ತು ಕಾಮಾಕ್ಷಿ ಪಾಳ್ಯ ಕೆರೆಗಳ ಸರ್ವೆ ನಡೆಸುವಂತೆ ಸ್ಥಳೀಯ ತಹಸೀಲ್ದಾರ್ ಮತ್ತು ಎಡಿಎಲ್ ಆರ್ ಗೆ ಮನವಿ ಸಲ್ಲಿಸಲಾಗಿದೆ.
ಕೋವಿಡ್ ಕಾರಣಕ್ಕೆ ಕೆಲಸ ಸ್ವಲ್ಪ ವಿಳಂಬವಾಗಿದೆ. ಸರ್ವೇ ನಂತರ ಗಡಿಗಳನ್ನು ಗುರುತಿಸಿ ತಂತಿ ಬೇಲಿ ಅಳವಡಿಸಲಾಗುವುದು, ಒತ್ತುವರಿ ತೆರವಿಗೆ ಕ್ರಮ ಜರುಗಿಸಲಾಗುವುದು. ಹಾಗೆಯೇ ಕೆರೆಗಳ ಅಭಿವೃದ್ಧಿಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.