ಚಿತ್ರದುರ್ಗ : ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರವಿರುವ ಒಂದು ಪುಟ್ಟ ಗ್ರಾಮ. ಅಲ್ಲಿ ಗ್ರಾಮ ಪಂಚಾಯತ್ ಇದ್ದರೂ ಇಲ್ಲದಂತಾಗಿದೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಓಬಣ್ಣನ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ವರ್ಷಗಳಿಂದ ತಲೆದೋರಿದೆ. ಹನಿ ನೀರಿಗಾಗಿ ಈ ಗ್ರಾಮದ ಜನರು ಒಂದೆರೆಡು ಕಿಲೋಮೀಟರ್ ದೂರ ಸಂಚರಿಸಿ ನೀರನ್ನು ಸೇದುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಗ್ರಾಮಸ್ಥರು ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದರು. ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಬೇಕೆಂದು ಅಧಿಕಾರಿಗಳ ಮುಂದೆ ಬೇಡಿಕೆಯಿಟ್ಟ ಬೆನ್ನಲ್ಲೇ ಅಧಿಕಾರಿಗಳು ಖಾಸಗಿ ಬೋರ್ವೆಲ್ನ ಬಾಡಿಗೆಗೆ ಪಡೆದು ಕುಡಿಯುವ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಓಬಣ್ಣನ ಹಳ್ಳಿಯ ನೀರಿನ ಸಮಸ್ಯೆ ಬಗ್ಗೆ ಶಾಸಕ ತಿಪ್ಪಾರೆಡ್ಡಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಶಾಸಕರ ಬಳಿ ನೀರು ಕೇಳಲು ಹೋದರೆ ನೀವು ನನಗೆ ವೋಟ್ ಹಾಕಿಲ್ಲ ಎಂದು ಗದರಿ ಜನರನ್ನ ಕಳುಹಿಸುತ್ತಾರಂತೆ.
ಇದಕ್ಕೆ ತದ್ವಿರುದ್ಧವಾಗಿ ಚಿತ್ರದುರ್ಗದ ಪರಾಜಿತ ಜೆಡಿಎಸ್ ಅಭ್ಯರ್ಥಿ ವೀರೇಂದ್ರ ಪಪ್ಪಿ ನೀರಿನ ಸಮಸ್ಯೆ ದೂರ ಮಾಡುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್ವೆಲ್ ಕೊರೆಸಿದ್ದರು. ಆದರೆ, ನೀರು ಮಾತ್ರ ಬೀಳಲೇ ಇಲ್ಲ. ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಸಾಕಷ್ಟು ಹೋರಾಟ ಮಾಡಿದರೂ ಸಿಕ್ಕ ಪ್ರತಿಫಲ ಮಾತ್ರ ಖಾಸಗಿ ಬೋರ್ವೆಲ್ ಎಂಬುದು ಗ್ರಾಮಸ್ಥರ ಆರೋಪವಾಗಿದೆ.