ಬೆಂಗಳೂರು : ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ಶಕ್ತಿಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಎಫೆಕ್ಟ್ ಆಗಿರುವ ಹಾಗಿದೆ.
ಹೌದು, ನಿನ್ನೆ ಸಂಜೆ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದಿದೆ. ಹಾಗಾಗಿ, ವಿಧಾನಸೌಧ ಮತ್ತು ವಿಕಾಸಸೌಧ ಭಣಗುಡುತ್ತಿವೆ.
ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಹುತೇಕ ಸಚಿವರು ಕೂಡ ಲೋಕಸಭೆ ಚುನಾವಣೆ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು, ರಾಜಕಾರಣಿಗಳು, ಸಚಿವರು ಹಾಗೂ ಜನರಿಂದ ತುಂಬಿರುತ್ತಿದ್ದ ಶಕ್ತಿಸೌಧಗಳು ಇಂದು ಖಾಲಿ ಖಾಲಿಯಾಗಿದ್ದವು.
ಚುನಾವಣೆ ದಿನ ಘೋಷಣೆಯಾಗಿರುವುದರಿಂದ ಜನಪ್ರತಿನಿಧಿಗಳು ವಿಧಾನಸೌಧಕ್ಕೆ ಬರುವುದು ಕಡಿಮೆ. ಹೀಗಾಗಿ, ಜನಪ್ರತಿನಿಧಿಗಳನ್ನು ನೋಡಲು ಬರುವ ಸಾರ್ವಜನಿಕರ ಸಂಖ್ಯೆಯೂ ಕಡಿಮೆಯಾಗಿತ್ತು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಮ್ಮ ಕೆಲಸ ಕಾರ್ಯಗಳು ಆಗುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಚುನಾವಣೆ ಮುಗಿಯುವವರೆಗೂ ತಮ್ಮ ಕೆಲಸ ಕಾರ್ಯಗಳು ಆಗುವುದಿಲ್ಲ ಎಂದು ಭಾವಿಸಿರುವ ಜನರು, ಸರ್ಕಾರದ ಕಚೇರಿಗಳಿಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಬಹಳಷ್ಟು ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ, ಯಾವುದೇ ಕೆಲಸಗಳು ಅಷ್ಟಾಗಿ ನಡೆಯುವುದಿಲ್ಲ. ಚುನಾವಣೆ ಮುಗಿಯುವವರೆಗೂ ಇದೇ ರೀತಿ ಮುಂದುವರೆಯಲಿದೆ ಎನ್ನಲಾಗಿದೆ.