ಕಲಬುರಗಿ: ಕಳೆದ ವರ್ಷ ಹನ್ನೊಂದು ಲಕ್ಷ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಇವರಲ್ಲಿ ಯಾರೊಬ್ಬರು ರೆಮ್ಡಿಸಿವಿರ್ ಇಂಜೆಕ್ಷನ್ ತೆಗೆದುಕೊಂಡಿಲ್ಲ. ಅನಗತ್ಯವಾಗಿ ಜನರು ರೆಮ್ಡಿಸಿವಿರ್ ಹಿಂದೆ ಬೀಳಬಾರದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ನಗರದಲ್ಲಿ ಕೊವೀಡ್-19 ಸಂಬಂಧ ನಡೆದ ಸಭೆ ನಂತರ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 0.6ರಷ್ಟಿದೆ. ಕಳೆದ ವರ್ಷ 1.3ರಷ್ಟಿತ್ತು. ಆದರೆ ಈ ವರ್ಷ ಹೆಚ್ಚು ಜನರಿಗೆ ಸೋಂಕು ಹರಡುತ್ತಿರುವದರಿಂದ ಎಲ್ಲಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬ ಸೋಂಕಿತರಿಗೆ ರೆಮ್ಡಿಸಿವಿರ್ ಅಗತ್ಯವಿಲ್ಲ. ರೋಗಿಯನ್ನು ಬಿಟ್ಟು ಬೇರೆಯವರ ಹೆಸರಲ್ಲಿ ವೈದ್ಯರು ರೆಮ್ಡಿಸಿವಿರ್ ಪಡೆಯಬಾರದು. ಆ ರೀತಿ ಕಂಡು ಬಂದ್ರೆ ಆಸ್ಪತ್ರೆ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಮಹಾರಾಷ್ಟ್ರದಿಂದ ಬಂದವರಿಂದವಲೇ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದೆ. ಹೋಮ್ ಐಸೋಲೇಷನ್ನಲ್ಲಿರೋರಿಗೆ ಮೆಡಿಕಲ್ ಕಿಟ್ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸೋಂಕಿತರ ಜೊತೆ ವೈದ್ಯಕೀಯ ಸಮಾಲೋಚನೆ ಮಾಡಲು ಅಧಿಕಾರಿ, ಸಿಬ್ಬಂದಿಗೆ ತಿಳಿಸಲಾಗಿದೆ. ಸೋಂಕಿತರ ಮನೆಗೆ ಹೋಗಿ ಅವರಿಗೆ ಮಾರ್ಗದರ್ಶನ ನೀಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಎಲ್ಲಾ ಮೆಡಿಕಲ್ ಕಾಲೇಜು ಇರುವ ಆಸ್ಪತ್ರೆಯವರು ಶೇಕಡಾ ಎಪ್ಪತ್ತೈದರಷ್ಟು ಕೋವಿಡ್ ಬೆಡ್ ಸರ್ಕಾರಕ್ಕೆ ನೀಡಬೇಕು. ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಅವರನ್ನು ಜೈಲಿಗೆ ಕಳುಹಿಸಲು ಸೂಚನೆ ನೀಡಲಾಗಿದೆ ಎಂದರು.