ಹುಬ್ಬಳ್ಳಿ: ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಉಣಕಲ್ ಕೆರೆ ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಮಾರ್ಟ್ ಆಗುವುದಷ್ಟೇ ಅಲ್ಲದೆ ಕೆರೆಯ ಆಮ್ಲಜನಕದ ಪ್ರಮಾಣ ಕೂಡ ಹೆಚ್ಚಾಗಲಿದೆ.
ಹೌದು, ಇಲ್ಲಿನ ಐತಿಹಾಸಿಕ ಉಣಕಲ್ ಕೆರೆಗೆ ಪಿಶಾಚಿಯಂತೆ ಗಂಟು ಬಿದ್ದಿರುವ ಜಲಕಳೆಯ ಮಧ್ಯೆಯೂ ಸರ್ವ ಪ್ರಯತ್ನಗಳನ್ನು ಮುಂದುವರೆಸಲಾಗಿತ್ತು. ಅಲ್ಲದೇ ಒಳಚರಂಡಿ ಕೊಳಚೆಯಿಂದ ಮಲಿನಗೊಂಡಿದ್ದ ಕೆರೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡ ಬೆನ್ನಲ್ಲೇ ಕೆರೆಯಲ್ಲಿ ಕ್ರಮೇಣ ಜಲಕಳೆಯ ಪ್ರಮಾಣ ಕಡಿಮೆಯಾಗಿದ್ದು, ಈಗ ಕಾರಂಜಿಗಳನ್ನು ಹಾಕುವ ಮೂಲಕ ಸುಂದರಗೊಳಿಸಲಾಗಿದೆ.
14.83 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಗೊಳಿಸಲು ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಾರಂಜಿಗಳನ್ನು ಹಾಕಲಾಗಿದೆ. ಪ್ರಸ್ತುತವಾಗಿ ಕೆರೆಯಲ್ಲಿ ಜೈವಿಕ ತಂತ್ರಜ್ಞಾನ ಬಳಸಿ ಕೆರೆಯನ್ನು ಸ್ವಚ್ಛ ಮಾಡಲಾಗುತ್ತಿದ್ದು, ಅಲ್ಲದೇ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಉಣಕಲ್ ಕೆರೆಯ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ನಾಲ್ಕು ಏರೇಟರ್ಸ್( ಕಾರಂಜಿಯಂತೆ ಚಿಮ್ಮುವ ಯಂತ್ರ), ಫ್ಲೋಟಿಂಗ್ ರಾಫ್ಟರ್ಸ್ ಅಳವಡಿಸಲಾಗಿದ್ದು, ಇದರಿಂದ ಮಲಿನ ನೀರು ಶುದ್ಧವಾಗುವುದಲ್ಲದೇ ಆಮ್ಲಜನಕದ ಪ್ರಮಾಣ ಕೂಡ ಹೆಚ್ಚಾಗಲಿದೆ.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಚುರುಕುಗೊಂಡ ಬೆನ್ನಲ್ಲೇ ಉಣಕಲ್ ಕೆರೆಯು ಸ್ಮಾರ್ಟ್ ಆಗುವುದು ಮಾತ್ರವಲ್ಲದೇ ಹೊಸ ಲುಕ್ ಪಡೆದುಕೊಳ್ಳಲಿದೆ.