ಬೆಳಗಾವಿ: ಲೋಕಸಭೆ ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದ ಮೂಲಕ ನಾಳೆ ಬೆಳಗ್ಗೆ 9.30 ಕ್ಕೆ ಹೊರಡಲಿರುವ ಸಿಎಂ ಯಡಿಯೂರಪ್ಪ 10.30 ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ಸುವರ್ಣ ಸೌಧಕ್ಕೆ ತೆರಳಲಿದ್ದಾರೆ.
ಸುವರ್ಣ ಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 354ರಲ್ಲಿ ಕೊವೀಡ್ ನಿರ್ವಹಣೆ ಹಾಗೂ ಇತರ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1.30ರವರೆಗೆ ಸಭೆ ನಡೆಯಲಿದ್ದು, ನಂತರ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಹುಬ್ಬಳ್ಳಿಗೆ ತೆರಳಲಿದ್ದಾರೆ.
ಬೀಮ್ಸ್ ಗೆ ಮಾಡ್ತಾರಾ ಸರ್ಜರಿ:
ಕೊರೊನಾ ಸೋಂಕಿತರ ಆರೈಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಬೀಮ್ಸ್ ಅವ್ಯವಸ್ಥೆಯನ್ನು ಸಿಎಂ ಸರಿಪಡಿಸುತ್ತಾರಾ ಎಂಬುವುದು ಜಿಲ್ಲೆಯ ಜನರ ಕುತೂಹಲಕ್ಕೆ ಕಾರಣವಾಗಿದೆ. ಬೀಮ್ಸ್ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಡಳಿತ ಮಂಡಳಿ ಬದಲಿಸುವಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಸೋಂಕಿತರ ಹಾಗೂ ಜನಪ್ರತಿನಿಧಿಗಳ ಆಕ್ರೋಶಕ್ಕೆ ಗುರಿಯಾಗಿರುವ ಬೀಮ್ಸ್ ಬಗ್ಗೆ ಸಿಎಂ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದೇ ಸದ್ಯದ ಕುತೂಹಲವಾಗಿದೆ.