ಬೆಂಗಳೂರು: ರಾಜ್ಯದಲ್ಲಿ ಹಲವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, ಹಲವು ಹೆದ್ದಾರಿ ಯೋಜನೆಗಳ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಳೆದ ಜೂನ್ ತಿಂಗಳಿನಲ್ಲಿ ಅಧಿಕಾರ ಸ್ವೀಕರಿಸಿದ ಕೂಡಲೇ ಸಿಎಂ ಕುಮಾರಸ್ವಾಮಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿ ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದರು.
2019ರ ವೇಳೆಗೆ ಕಾಮಗಾರಿಗಳು ಪೂರ್ಣಗೊಳಿಸುವಂತೆ ತಾಕೀತು ಸಹ ಮಾಡಿದ್ದರು. ಆದರೆ, ವಾಸ್ತವದಲ್ಲಿ ಈಗಲೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಹಲವು ಯೋಜನೆಗಳು ಈಗಲೂ ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆ ಅನುಮತಿ ಸೇರಿದಂತೆ ಹಲವು ತೊಡಕುಗಳನ್ನು ಎದುರಿಸುತ್ತಿದ್ದು, ವಿಳಂಬ ಕಾಣುತ್ತಿದೆ.
ರಾಜ್ಯದಲ್ಲಿ ಒಟ್ಟು ರಾಷ್ಟ್ರೀಯ ಹೆದ್ದಾರಿ:
ರಾಜ್ಯದಲ್ಲಿ ಒಟ್ಟು 7622 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಒಟ್ಟು 3334 ಕಿ.ಮೀ. ಉದ್ದದ ಹೊಸ ಹೆದ್ದಾರಿ ಕಾಮಗಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿದೆ. ಸುಮಾರು 37 ಸಾವಿರ ಕೋಟಿ ರೂ ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಸುಮಾರು 1125 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪೂರ್ಣಗೊಂಡಿವೆ. ಉಳಿದಂತೆ ಸುಮಾರು 2119 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಅನುಷ್ಠಾನ ಹಂತದಲ್ಲೇ ಇದೆ.
2019-20ರಲ್ಲಿ 216 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದ್ದರೆ, 2019-20ರ ಬಳಿಕ 2,143 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಯಾವ ಯೋಜನೆ ಎಷ್ಟು ಪ್ರಗತಿ?
- ರಾಮನಗರ ವಿಭಾಗದಲ್ಲಿ ಒಟ್ಟು 288 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆರವೇರಿಸಲಾಗುತ್ತಿದ್ದು, ಈ ಪೈಕಿ ಕೇವಲ 106 ಕಿ.ಮೀ. ಉದ್ದದ ಹೆದ್ದಾರಿ ಕೆಲಸ ಪೂರ್ಣಗೊಂಡಿದೆ.
- ತುಮಕೂರು ವಿಭಾಗದಲ್ಲಿ ಒಟ್ಟು 214 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಗತಿ ಶೂನ್ಯವಾಗಿದೆ.
- ಅದೇ ರೀತಿ ಹಾಸನ ವಿಭಾಗದಲ್ಲಿ 108 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕೆಲಸನೇ ಪ್ರಾರಂಭವಾಗಿಲ್ಲ.
- ಹೊಸಪೇಟೆ ವಿಭಾಗದಲ್ಲಿ 255 ಕಿ.ಮೀ. ಉದ್ಧದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೈಕಿ ಕೇವಲ 41.50 ಕಿ.ಮೀ. ಮಾತ್ರ ಪೂರ್ಣಗೊಂಡಿದೆ.
- ಇತ್ತ ಚಿತ್ರದುರ್ಗ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗಿರುವ 272 ಕಿ.ಮೀ. ಕಾಮಗಾರಿ ಪೈಕಿ 183.70 ಕಿ.ಮೀ. ಪೂರ್ಣಗೊಂಡಿದೆ.
- ಧಾರವಾಡ ವಿಭಾಗದಲ್ಲಿ 348 ಕಿ.ಮೀ. ಉದ್ದದ ಕಾಮಗಾರಿ ಪೈಕಿ ಕೇವಲ 144 ಕಿ.ಮೀ ಪೂರ್ಣಗೊಂಡಿದೆ.
- ಇನ್ನು ಮಂಗಳೂರು ವಿಭಾಗದಲ್ಲಿನ 269 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆ ಪೈಕಿ 219 ಕಿ.ಮೀ. ಕಾಮಗಾರಿ ಪೂರ್ಣವಾಗಿದೆ.
- ಹಾಗೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (117 ಕಿ.ಮೀ) ಕಾಮಗಾರಿ ಇನ್ನೂ ಪ್ರಾರಂಭಿಕ ಹಂತದಲ್ಲಿ ಇದ್ದು, 2021ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇಡಲಾಗಿದೆ.
- ಅದೇ ರೀತಿ ಎನ್ಹೆಚ್-17 ಗೋವಾ ಗಡಿಯಿಂದ ಕಾರವಾರ ಮೂಲಕ ಕುಂದಾಪುರ ವರೆಗಿನ 170 ಕಿ.ಮೀ ಉದ್ದದ ಹೆದ್ದಾರಿ ಕಾಮಗಾರಿಯೂ 2019ರ ಡೆಡ್ಲೈನ್ ತಲುಪುವುದು ಅಸಾಧ್ಯವಾಗಿದೆ.
- ಇನ್ನು ಎನ್ಹೆಚ್ 206 ತುಮಕೂರು-ಶಿವಮೊಗ್ಗ ಚತುಷ್ಪಥ (205 ಕಿ.ಮೀ), ಬಳ್ಳಾರಿ-ಹಿರಿಯೂರು ಎನ್ಹೆಚ್ 150 ಕಾಮಗಾರಿ, ಬೆಂಗಳೂರು-ಹಾಸನವರೆಗಿನ 180 ಕಿ.ಮೀ. ಉದ್ದದ ಎನ್ಹೆಚ್ 48 ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ.