ಕೋಲ್ಕತಾ (ಪಶ್ಚಿಮ ಬಂಗಾಳ): ಟಾರ್ಪಾಲಿನ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರ ಇಂದು ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾದರು. ಈ ಕುರಿತು ಹೈಕೋರ್ಟ್ ಜೂನ್ 22 ರಂದು ವಿಚಾರಣೆ ನಡೆಸಲಿದೆ.
ಕಾಂತಿ ಪುರಸಭೆ ಕಚೇರಿಯಿಂದ ಪರಿಹಾರ ಸಾಮಗ್ರಿಗಳನ್ನು ಕದ್ದ ಆರೋಪದ ಮೇಲೆ ಜೂನ್ 5 ರಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೆಂದು ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಕಾಂತಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನದೀಪ್ ಮನ್ನಾ ಅವರ ದೂರಿನ ಮೇರೆಗೆ ಅಧಿಕಾರಿ ಸಹೋದರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 29 ರಂದು ಮಧ್ಯಾಹ್ನ 12:30ಕ್ಕೆ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೆಂದು ಅಧಿಕಾರಿ ಲಕ್ಷಾಂತರ ರೂ. ಬೆಲೆಯ ಪರಿಹಾರ ಸಾಮಗ್ರಿಗಳನ್ನು ಕಾನೂನು ಬಾಹಿರವಾಗಿ ತೆರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಬಿಜೆಪಿ ನಾಯಕರು ಸಶಸ್ತ್ರ ಕೇಂದ್ರ ಪಡೆಗಳ ಸಹಾಯವನ್ನು ಈ ಕೃತ್ಯಕ್ಕೆ ಬಳಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾತನಾಡಿದ ಸುವೇಂದು ಅಧಿಕಾರಿ, "ನನ್ನ ವಿರುದ್ಧ ದಾಖಲಾದ ಎಫ್‌ಐಆರ್ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ಇದು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಹಳೆಯ ಅಭ್ಯಾಸವಾದ್ದರಿಂದ ನಾನು ಈ ವಿಷಯದಲ್ಲಿ ಏನನ್ನೂ ಹೇಳುವುದಿಲ್ಲ" ಎಂದು ಹೇಳಿದ್ದಾರೆ.