ಕಾರವಾರ: ಜಿಂದಾಲ್ ಕಂಪನಿಗೆ ಸರ್ಕಾರ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿದೆ ಎಂದು ವಿರೋಧ ಪಕ್ಷಗಳು ವಿನಾ ಕಾರಣ ಆರೋಪ ಮಾಡುತ್ತಿವೆ. ಆದರೆ, ಬಿಜೆಪಿ ಸರ್ಕಾರ ಇದ್ದಾಗಲೇ ಕಂಪನಿಗೆ ಭೂಮಿ ನೀಡಲು ಹಣ ನಿಗದಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಕಾರವಾರದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಮ್ಮಿಶ್ರ ಸರ್ಕಾರದ ಮೇಲೆ ವಿರೋಧ ಪಕ್ಷದವರು ಅನಾವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ. ಯಾವುದೇ ಆರೋಪ ಮಾಡುವ ಮುನ್ನ ಅದನ್ನು ಸಂಪೂರ್ಣವಾಗಿ ತಿಳಿದು ಮಾತನಾಡಬೇಕು. ಇಂಥ ವಿಷಯದಲ್ಲಿ ವಿರೋಧ ಪಕ್ಷ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಕುಟುಕಿದರು.
ಕಂಪನಿಯವರು ಸಾವಿರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಇದರಿಂದ ಸ್ಥಳೀಯರು ಸೇರಿದಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿ ಮಾಡಲಾಗಿದೆ. ಹೀಗೆ ವಿರೋಧ ಅಥವಾ ಸಮಸ್ಯೆಯುಂಟಾದರೆ ರಾಜ್ಯದಲ್ಲಿ ಬಂಡವಾಳ ಹೂಡಲು ಯಾರು ಮುಂದೆ ಬರುತ್ತಾರೆ. ಹಿಂದೆ ತೆಗೆದುಕೊಂಡ ಭೂಮಿಗೆ ಈಗ ಬೆಲೆ ಹೆಚ್ಚಾದರೇ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಪುನರ್ ಪರಿಶೀಲನಾ ಉಪ ಸಮಿತಿ ರಚಿಸಲಾಗಿದೆ ಎಂದು ಹೇಳಿದರು. ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಶಾಸಕ ಶಿವರಾಂ ಹೆಬ್ಬಾರ ಕೂಡ ಯೋಗ್ಯರಿದ್ದಾರೆ. ಅವರಿಗೂ ಸಿಗಬೇಕು. ಆದರೆ, ನಾನು ಮಂತ್ರಿಸ್ಥಾನಕ್ಕೆ ಜೋತುಬಿದ್ದವನಲ್ಲ. ನನ್ನ ಕೆಲಸ ಹಾಗೂ ಜನರ ಆಶಿರ್ವಾದದಿಂದ ಸಿಕ್ಕಿರುವ ಸ್ಥಾನವನ್ನು ಸರಿಯಾಗಿ ನಿಭಾಯಿಸುತ್ತಿದ್ದೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.