ಮಥುರಾ (ಉತ್ತರ ಪ್ರದೇಶ): ಕತ್ರ ಕೇಶವ್ ದೇವ್ ದೇವಾಲಯ ಸಂಕೀರ್ಣದೊಳಗಿರುವ 17 ನೇ ಶತಮಾನದ ಮೊಘಲ್ ಯುಗದ ಶಾಹಿ ಮಸೀದಿಯನ್ನು ಮಸೀದಿಯ ನಿರ್ವಹಣಾ ಸಮಿತಿ ಸ್ವಯಂಪ್ರೇರಣೆಯಿಂದ ನೆಲಸಮ ಮಾಡಲು ಒಪ್ಪಿದರೆ, ಅವರಿಗೆ ದೇವಾಲಯದ ಪಕ್ಕದಲ್ಲೇ ದೊಡ್ಡದಾದ ಭೂಮಿಯನ್ನು ನೀಡುವುದಾಗಿ ದೇವಾಲಯ ಸಮಿತಿಯು ಮಥುರಾ ನ್ಯಾಯಾಲಯಕ್ಕೆ ತಿಳಿಸಿದೆ.
ಮಥುರಾ ಪಟ್ಟಣದ “ಚೌರಾಸಿ ಕೋಸ್ ಪರಿಕರ್ಮಾ” ಸರ್ಕ್ಯೂಟ್ ಹೊರಗಿನ ದೊಡ್ಡ ಪ್ರಮಾಣದ ಭೂಮಿಯನ್ನು ಮಸೀದಿ ನಿರ್ವಹಣಾ ಸಮಿತಿಗೆ ನೀಡುವುದಾಗಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ್ ಸಮಿತಿ ಮಥುರಾ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
"ಮಸೀದಿಯ ನಿರ್ವಹಣಾ ಸಮಿತಿಗೆ ಶಾಹಿ ಮಸೀದಿ ಇರುವ ಈಗಿರುವ ಜಾಗಕ್ಕಿಂತ ದೊಡ್ಡದಾದ ಭೂಮಿಯನ್ನು ನೀಡಲಾಗುವುದು" ಎಂದು ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ್ ಸಮಿತಿಯ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ. ಸಿವಿಲ್ ನ್ಯಾಯಾಧೀಶ ಅನುಪಮ್ ಸಿಂಗ್ ಅವರಿಗೆ ಅರ್ಜಿ ಸಲ್ಲಿಸಲಾಗಿದೆ.
ಭಗವಾನ್ ಶ್ರೀ ಕೃಷ್ಣನ ಜನ್ಮಸ್ಥಳ ಸಮೀಪವಿರುವ ಕತ್ರ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ನಿರ್ಮಿಸಲಾದ ಮಸೀದಿಯನ್ನು ತೆಗೆದುಹಾಕಬೇಕೆಂದು ಕೋರಿ ಮಥುರಾದ ಸಿವಿಲ್ ನ್ಯಾಯಾಲಯದಲ್ಲಿ ಹಲವಾರು ಅರ್ಜಿಗಳು ವಿಚಾರಣೆಗಾಗಿ ಬಾಕಿ ಉಳಿದಿವೆ.