ಶಿವಮೊಗ್ಗ: ನಾಥೂರಾಮ್ ಗೋಡ್ಸೆ ಹಿಂದೂ ಉಗ್ರವಾದಿ ಎಂದ ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆದಿರುವುದನ್ನು ಖಂಡಿಸಿ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಟಿ.ಆರ್ ಕೃಷ್ಣಪ್ಪ ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಂಡು ವಿಭಿನ್ನವಾಗಿ ಖಂಡನೆ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ರಿಪ್ಪನ್ಪೇಟೆ ಕೃಷ್ಣಪ್ಪ, ಖಾವಿಗೆ ತನ್ನದೇ ಆದ ಬೆಲೆ ಇದೆ. ಇದನ್ನ ಹಾಕಿಕೊಂಡವರು ಯೋಚನೆ ಮಾಡಿ ಮಾತನಾಡಬೇಕು ಎಂದು ಪ್ರಗ್ಯಾಸಿಂಗ್ ವಿರುದ್ಧ ಹರಿಹಾಯ್ದರು. ಗೋಡ್ಸೆ ಒಬ್ಬ ದೇಶಭಕ್ತ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕೃಷ್ಣಪ್ಪ, ಇದೇ ವೇಳೆ, ತಮ್ಮ ತಪ್ಪು ತಿದ್ದಿಕೊಂಡ ಪ್ರಜ್ಞಾ ಸಿಂಗ್ ಕೈ ಮುಗಿದು ಕ್ಷಮೆಯಾಚಿಸಿರುವುದು ಸ್ವಾಗತಾರ್ಹ ಎಂದರು.
ಆದರೆ, ಪ್ರಗ್ಯಾಸಿಂಗ್ ಹೇಳಿಕೆ ಖಂಡಿಸಿದ ಕಮಲ್ ಹಾಸನ್ ಗೋಡ್ಸೆ ಹಿಂದೂ ಉಗ್ರವಾದಿ ಎಂದಿದ್ದಕ್ಕೆ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ. ಕಮಲ್ ಹಾಸನ್ ಒಬ್ಬ ಜನಪ್ರಿಯ ನಟನಾಗಿದ್ದು ಅವರ ಮೇಲೆ ಚಪ್ಪಲಿ ಎಸೆದಿರುವುದು ಸರಿಯಲ್ಲ. ಹಾಗಂತ ಚಪ್ಪಲಿ ಏನೂ ಕೇಳಿಲ್ಲ, ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿ ಸುದ್ದಿಗೋಷ್ಠಿಯಲ್ಲೇ ಖಾವಿ ಧಿರಿಸಿನಲ್ಲೇ ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಂಡು ವಿಭಿನ್ನವಾಗಿ ಖಂಡಿಸಿದರು.
ನಾಥೂರಾಮ್ ಗೋಡ್ಸೆ ಹಿಂದೂ ಉಗ್ರವಾದಿ ಎಂಬ ಕಮಲ್ ಹಾಸನ್ ಹೇಳಿಕೆ ಕುರಿತು ಮಾತನಾಡಿದ ಅವರು ಕಮಲ್ ಹಾಸನ್ ಅವರು ಹೇಳಿದ್ದು ಸರಿ ಇರಬಹುದು ಆದರೆ, ಹಿಂದೂ ಎಂದು ಹೇಳಿದ್ದು ಸರಿಯಲ್ಲ ಎಂದರು.