ಶ್ರೇಯಸ್ ಮಂಜು ಅಭಿನಯದಲ್ಲಿ ಪೊಗರು ನಂದಕಿಶೋರ್ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಹೊಸದೇನಲ್ಲ. ಈಗಾಗಲೇ ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರದ ಮುಹೂರ್ತ ನೆರವೇರಬೇಕಿತ್ತು.
ಏಪ್ರಿಲ್ ಕೊನೆಯ ವಾರ ಅಥವಾ ಮೊದಲ ವಾರದಲ್ಲಿ ಚಿತ್ರವನ್ನು ಪ್ರಾರಂಭಿಸುವುದಾಗಿ ನಂದಕಿಶೋರ್ ಹೇಳಿಕೊಂಡಿದ್ದರು. ಆದರೆ, ಕೊರೊನಾ ಎರಡನೇ ಅಲೆಯಿಂದಾಗಿ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದೆ. ಮುಹೂರ್ತ ಮುಂದಕ್ಕೆ ಹೋದರೇನಂತೆ, ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನಾದರೂ ಮಾಡಿಕೊಂಡರಾಯಿತು ಎಂದು ತೀರ್ಮಾನಿಸಿರುವ ಚಿತ್ರತಂಡ ಸದ್ದಿಲ್ಲದೆ ಸ್ಕ್ರಿಪ್ಟ್ ಪೂಜೆ ಮುಗಿಸಿದೆ.
ಜನತಾ ಕರ್ಫ್ಯೂ ಶುರುವಾಗುವುದಕ್ಕಿಂತ ಮುಂಚೆಯೇ ಹೊಸಪೇಟೆ ಬಳಿ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಚಿತ್ರತಂಡವು ಸ್ಕ್ರಿಪ್ಟ್ ಪೂಜೆ ಮುಗಿಸಿ ಬಂದಿದೆ. ಈ ಸಂದರ್ಭದಲ್ಲಿ ಶ್ರೇಯಸ್ ಮಂಜು, ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಗುಜ್ಜಾಲ್ ಪುರುಷೋತ್ತಮ್, ಕೆ. ಮಂಜು ಮುಂತಾದವರು ಹಾಜರಿದ್ದರು.
ಸದ್ಯಕ್ಕೆ ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಚಿತ್ರತಂಡದವರು ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಕೊರೊನಾ ಎರಡನೆಯ ಅಲೆ ಕಡಿಮೆಯಾಗಿ, ಚಿತ್ರೀಕರಣ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಿದ ನಂತರ ಚಿತ್ರತಂಡದವರು ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಯೋಚಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ಶ್ರೇಯಸ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದು ಮಿಕ್ಕಂತೆ ಉಳಿದ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಶೇಖರ್ ಚಂದ್ರ ಛಾಯಾಗ್ರಹಣ ಮತ್ತು ಚಂದನ್ ಶೆಟ್ಟಿ ಸಂಗೀತ ಈ ಚಿತ್ರಕ್ಕಿದ್ದು, ನಂದಕಿಶೋರ್ ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆಯನ್ನೂ ರಚಿಸಿದ್ದಾರೆ.