ಮಂಗಳೂರು: ಮರಳು ಮಾಫಿಯಾದಿಂದ ಮರವೂರು ಸೇತುವೆ ಕುಸಿದಿದ್ದು, ರಾಜಕಾರಣಿಗಳ ಕೃಪಾಕಟಾಕ್ಷದಿಂದ ನಡೆಯುತ್ತಿರುವ ಈ ಮರುಳು ಮಾಫಿಯಾ ಬಗ್ಗೆ ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದ್ದರೂ ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಇಂದು ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದರಿಂದಲೇ ಈ ದುರಂತ ಸಂಭವಿಸಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸೇತುವೆ ಕುಸಿದಿರುವ ಪರಿಣಾಮ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಸರಗೋಡು, ಮಂಗಳೂರು ಕಡೆಯಿಂದ ಬರುವವರಿಗೆ ಬಹಳಷ್ಟು ತೊಂದರೆಯಾಗಲಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
60 ವರ್ಷಗಳ ಹಿಂದೆ ನಿರ್ಮಾಣವಾದ ಸುಸಜ್ಜಿತವಾಗಿರುವ ಸೇತುವೆ ಮರಳು ಮಾಫಿಯಾದಿಂದ ಕುಸಿದಿದೆ ಎನ್ನುವುದು ಬಹಳ ನೋವಿನ ವಿಚಾರ. ಈ ಸೇತುವೆ ಪಕ್ಕದಲ್ಲಿಯೇ ವೆಂಟೆಡ್ ಡ್ಯಾಂ, ಕೊಂಕಣ ರೈಲ್ವೆ ಬ್ರಿಡ್ಜ್ ಗಳಿದ್ದು, ಇವುಗಳ ಮಧ್ಯೆ ಈಗಲೂ ಮರಳುಗಾರಿಕೆಗೆ ಡ್ರೆಜ್ಜಿಂಗ್ ಮಾಡಲಾಗುತ್ತದೆ. ಅಲ್ಲಿ ಇನ್ನೊಂದು ನೂತನ ಸೇತುವೆಯ ನಿರ್ಮಾಣ ಕಾರ್ಯ ಆಗುತ್ತಿದ್ದು, ಈ ಸಂದರ್ಭ ಪಿಡಬ್ಲ್ಯುಡಿ ಉನ್ನತ ಇಂಜಿನಿಯರ್ ಗಳು ಭೇಟಿ ನೀಡಬೇಕಿತ್ತು. ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಜವಾಬ್ದಾರಿ ಇದೆ ಎಂದು ಅಭಯಚಂದ್ರ ಜೈನ್ ಹೇಳಿದರು.
ಭ್ರಷ್ಟರಲ್ಲಿ ಭ್ರಷ್ಟರು ಯಾರಾದರೂ ಇದ್ದಲ್ಲಿ, ಅದು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು. ಇವರೇ ಅಲ್ಲಿ ಮರಳು ಎತ್ತಲು ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಮರಳುಗಾರಿಕೆ ಕೊಂಕಣ ರೈಲ್ವೆ ಸೇತುವೆಗೂ ದುಷ್ಪರಿಣಾಮ ಬೀರಲಿದೆ. ಕನಿಷ್ಠ ಪಕ್ಷ ಸೇತುವೆ ಆಗುವ ಸಂದರ್ಭದಲ್ಲಿಯಾದರೂ ಮರಳುಗಾರಿಕೆಗೆ ತಡೆ ಮಾಡಬೇಕಿತ್ತು ಎಂದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಮರವೂರು ಸೇತುವೆ ಕುಸಿಯಲು ಡ್ರೆಜ್ಜಿಂಗ್ ನಿಂದ ಮರಳುಗಾರಿಕೆ ನಡೆಯುತ್ತಿರುವುದೇ ಕಾರಣ. ಅಲ್ಲದೆ ನೂತನ ಸೇತುವೆ ಕಾಮಗಾರಿ ನಡೆಯುತ್ತಿರುವಾಗ 600 ಮೀಟರ್ ಅಗಲದ ನದಿಯಲ್ಲಿ ಕೇವಲ 5 ಮೀಟರ್ ಮಾತ್ರ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಸೇತುವೆ ಕುಸಿಯಲು ನಿಜವಾದ ಕಾರಣವೇನು ಎಂಬುದಕ್ಕೆ ತನಿಖಾ ತಂಡ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆದಷ್ಟು ಶೀಘ್ರದಲ್ಲೇ ತನಿಖಾ ವರದಿಯನ್ನು ಜಿಲ್ಲಾಧಿಕಾರಿಯವರು ನಮ್ಮ ಮುಂದೆ ಇಡಬೇಕು. ಅಲ್ಲದೆ ಹೊಸ ಸೇತುವೆ ಕಾಮಗಾರಿ ಸಮರೋಪಾದಿಯಲ್ಲಿ ನಡೆದು ಜನರಿಗೆ ಓಡಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.