ಮುಂಬೈ: ಕೋರ್ಟ್ ಆದೇಶ ಉಲ್ಲಂಘಿಸಿ ಬಾಲಿವುಡ್ ನಟ ಕಮಲ್ ಆರ್ಖಾನ್ ಅವಹೇಳನಕಾರಿ ಹೇಳಿಕೆ ಮುಂದುವರೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಕ್ಕಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಾಲಿವುಡ್ ನಟ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಮಲ್ ಆರ್ಖಾನ್ ಅವರು ನೇರವಾಗಿ ಅಥವಾ ಪರೋಕ್ಷವಾಗಿ ನನ್ನ ಮುಂದಿನ ಯೋಜನೆಗಳ ಕುರಿತು ವಿಡಿಯೋ ಮಾಡುವುದನ್ನು ತಡೆಯುವಂತೆ ಕೋರಿ ಕಳೆದ ತಿಂಗಳು ಮಾನಹಾನಿ ಮೊಕದ್ದಮೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಕಮಲ್ ಆರ್ಖಾನ್ ಪರ ವಕೀಲ ಮನೋಜ್ ಗಡ್ಕರಿ ನ್ಯಾಯಾಲಯಕ್ಕೆ ಮುಂದಿನ ದಿನಾಂಕದ ವಿಚಾರಣೆಯ ತನಕ ಸಲ್ಮಾನ್ ವಿರುದ್ಧ ತಮ್ಮ ಅರ್ಜಿದಾರ ಯಾವುದೇ ಮಾನಹಾನಿಕರ ಪೋಸ್ಟ್ ಅಥವಾ ಟೀಕೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದರು.
ಕಳೆದ ತಿಂಗಳು ಒಟಿಟಿಯಲ್ಲಿ ಬಿಡುಗಡೆಯಾಗಿದ್ದ 'ರಾಧೆ' ಚಿತ್ರದ ವಿಮರ್ಶೆ ಕುರಿತು ಕಮಲ್ ಆರ್ಖಾನ್ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿವಿ ಮರಾಠೆಗೆ ಭರವಸೆ ನೀಡಿದ ಬಳಿಕವೂ ಮಾನಹಾನಿ ಟ್ವೀಟ್ಗಳನ್ನು ಪ್ರಕಟಿಸುವುದನ್ನು ಮುಂದುವರೆಸಿದ್ದಾರೆ ಎಂದು ಸಲ್ಮಾನ್ ಪರ ವಕೀಲ ಪ್ರದೀಪ್ ಘಾಂಡಿ ವಾದಿಸಿದರು.
ಕಮಲ್ ಆರ್ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಸಂಬಂಧ ಕ್ರಮ ಕೋರಿ ಅರ್ಜಿ ಸಲ್ಲಿಸಲಾಯಿತು. ಅರ್ಜಿಯ ಕುರಿತು ವಾದಗಳನ್ನು ಆಲಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಖಾನ್ ಪರ ವಕೀಲ ಮನೋಜ್ ಗಡ್ಕರಿ ನೀಡಿದ ಹೇಳಿಕೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಹೇಳಿದೆ.