ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಭೇಟಿಕೊಟ್ಟು ಮಾತುಕತೆ ನಡೆಸಿದರು. ಇದರಿಂದಾಗಿ ರಮೇಶ್ ಜಾರಕಿಹೊಳಿ ಅವರಿಗೆ ಆಪ್ತರ ಬೆಂಬಲ ಸಿಗುತ್ತಾ ಎಂಬ ಕುತೂಹಲ ಮೂಡಿದೆ.
ಬೆಂಗಳೂರಿನ ಸವೆನ್ ಮಿನಿಸ್ಟರ್ ಕ್ವಾಟ್ರಸ್ನಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಮಹೇಶ್ ಕುಮಟಳ್ಳಿ ಅರ್ಧ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದರು. ಮಹೇಶ್ ಕುಮಟಳ್ಳಿ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಕ್ಷೇತ್ರದ ಕೆಲಸಕ್ಕಾಗಿ ಅವರ ಬಳಿ ಬಂದಿದ್ದೇನೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಕುಂದಗೋಳ ಉಪಚುನಾವಣೆಯಲ್ಲಿ ಡಿಕೆಶಿ ಜೊತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮಹೇಶ್ ಅವರು ದಿಢೀರ್ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಮೇ 23 ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಪರೇಷನ್ ಕಮಲಕ್ಕೆ ಚಾಲನೆ ಸಿಗುವುದಾ ಅನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿ, ನಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡ್ತಿದ್ದೇವೆ. ಕೃಷ್ಣಾ ನದಿಯಲ್ಲಿ ನೀರಿಲ್ಲ, ಅದರ ಫೈಲ್ ತೆಗೆದುಕೊಂಡು ಬಂದಿದ್ದೇನೆ ಎಂದರು.
ಇನ್ನು ಮಾಜಿ ಸಚಿವ ಸಿ ಪಿ ಯೋಗೀಶ್ವರ್ ರಮೇಶ್ ಜಾರಕಿಹೊಳಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಕುಮಟಳ್ಳಿ, ಎಲ್ಲರೂ ಭೇಟಿಯಾಗ್ತಾರೆ. ಅದಕ್ಕೆ ಯಾವುದೇ ವಿಶೇಷ ಅರ್ಥ ಬೇಡ. ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಕುರಿತು ಅವರನ್ನೇ ಕೇಳಿ. ಅವರೂ ಪಕ್ಷ ಬಿಟ್ಟು ಹೋಗಲ್ಲ, ನಾವೂ ಹೋಗಲ್ಲ. ನಮ್ಮೆಲ್ಲರ ನಿರ್ಧಾರ ಒಂದೇ ಆಗಿದೆ ಎಂದರು.