ಚೆನ್ನೈ: ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದ ಬಿಗ್ಬಾಸ್ ಮಲಯಾಳಂ ಸೀಸನ್ 3ರ ಚಿತ್ರೀಕರಣವನ್ನು ಕಂದಾಯ ಅಧಿಕಾರಿಗಳು ತಡೆದಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಮಧ್ಯೆ ಚಲನಚಿತ್ರ ಮತ್ತು ಟೆಲಿವಿಷನ್ ಚಿತ್ರೀಕರಣಗಳನ್ನು ನಿಷೇಧಿಸಿದ ಬಳಿಕವೂ ರಿಯಾಲಿಟಿ ಶೋ ಚಿತ್ರೀಕರಣವನ್ನು ಸಿಬ್ಬಂದಿ ಮುಂದುವರೆಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಪರ್ಧಿಗಳು, ಕ್ಯಾಮೆರಾಮೆನ್ಗಳು ಸೇರಿ ಎಲ್ಲರನ್ನು ಜಾಗ ಖಾಲಿ ಮಾಡಿಸಿದ್ದಾರೆ.
ಕಳೆದ ವಾರ, ಸೆಟ್ನಲ್ಲಿದ್ದ ಆರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಶೋ ಚಿತ್ರೀಕರಣ ಮಾತ್ರ ನಿಲ್ಲಿಸಿರಲಿಲ್ಲ. ಜೊತೆಗೆ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆಧಾರದ ಮೇಲೆ, ಬಿಗ್ಬಾಸ್ ಸೆಟ್ ಮೇಲೆ ಕಂದಾಯ ಅಧಿಕಾರಿಗಳು ದಾಳಿ ನಡೆಸಿ, ಚಿತ್ರೀಕರಣ ಸ್ಥಗಿತಗೊಳಿಸಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಎತ್ತಂಗಡಿ?
ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ (ಎಫ್ಇಎಫ್ಎಸ್ಐ) ಮುಖ್ಯಸ್ಥ ಆರ್.ಕೆ.ಸೆಲ್ವಮಣಿ ಅವರು ರಾಜ್ಯದಲ್ಲಿ ಶೂಟಿಂಗ್ ಚಟುವಟಿಕೆಯನ್ನು ಮೇ 31 ರವರೆಗೆ ಸ್ಥಗಿತಗೊಳಿಸುವುದಾಗಿ ಈ ಹಿಂದೆ ಘೋಷಿಸಿದ್ದರು. ಆದರೂ ಚಿತ್ರೀಕರಣ ಕೈಗೊಂಡ ಬಿಗ್ಬಾಸ್ ಮಲಯಾಳಂ ತಂಡ ನಿಯಮ ಉಲ್ಲಂಘನೆ ಮಾಡಿದೆ.
ಇನ್ನು ಕರ್ನಾಟಕದಲ್ಲಿ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆ ಬಿಗ್ಬಾಸ್ ಸೀಸನ್ 8ನ್ನು ರದ್ದುಗೊಳಿಸಲಾಗಿತ್ತು.