ಬೆಂಗಳೂರು: ಒಂದು ವರ್ಷದಿಂದ 15 ಸಾವಿರ ಕುಟುಂಬಕ್ಕೆ ರೇಷನ್ ಕಿಟ್ ಹಂಚಿ ಬಡವರ ಹಸಿವನ್ನ ನೀಗಿಸುತ್ತಿರುವ ಶಿಶು ಮಂದಿರ ಸಂಸ್ಥೆ ಕಳೆದ ಒಂದು ವರ್ಷದಿಂದ ಬಡವರ ಪಾಲಿನ ಆಪದ್ಬಾಂಧವನಾಗಿದೆ.
ಆಪತ್ತಿಗಾದವನೇ ಆಪದ್ಬಾಂಧವ ಅನ್ನೋ ಮಾತಿನಂತೆ ಕೊರೊನಾ ಕಷ್ಟ ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದಾಗ ಮಹದೇವಪುರ ಕ್ಷೇತ್ರದ ಕಿತ್ತಗನೂರಿನಲ್ಲಿರುವ ಶಿಶುಮಂದಿರ ಸಂಸ್ಥೆ ಫುಡ್ ಕಿಟ್ಗಳನ್ನ ವಿತರಿಸಿ ಜನರ ಹಸಿವು ನೀಗಿಸುವ ಪುಣ್ಯದ ಕೆಲಸ ಮಾಡುತ್ತಿದೆ. ಶಿಶುಮಂದಿರ ಮತ್ತು ಟೆಕ್ ಮಹೀಂದ್ರ ಸಂಸ್ಥೆ ಕಳೆದ ಒಂದು ವರ್ಷದಿಂದ ಕಿತ್ತಗನೂರು, ಕೆ.ಆರ್. ಪುರ, ಭಟ್ಟರಹಳ್ಳಿ, ಜ್ಯೋತಿ ನಗರ, ಹಳೆ ಹಳ್ಳಿ ಮಾರಗೊಂಡಹಳ್ಳಿ, ಸುತ್ತಮುತ್ತಲಿನ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ, ಕಡು ಬಡವರನ್ನು ಗುರುತಿಸಿ ಫುಡ್ ಕಿಟ್ ವಿತರಿಸಿದೆ. ಕೊರೊನಾ ಬಿಕ್ಕಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಸಂಸ್ಥೆ ಈ ಕಾರ್ಯ ಮಾಡುತ್ತ ಬಂದಿರುವುದು ಶ್ಲಾಘನೀಯ.
ಶಿಶುಮಂದಿರ ಸಂಸ್ಥೆಯು ಕೊರೊನಾ ಆರಂಭವಾದ ಮೇಲೆ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ನಿಂತಿದೆ. ಅಂಗವಿಕಲರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮಂಗಳಮುಖಿಯರು, ಸ್ಲಂ ನಿವಾಸಿಗಳಿಗೆ ಮತ್ತು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಕೆಲಸ ಮಾಡುವ ಸಿಬ್ಬಂದಿಗಳಿಗೆ ರೇಷನ್ ಕಿಟ್ಗಳನ್ನು ನೀಡುತ್ತಾ ಬಂದಿದೆ.
ಇವರ ಸಮಾಜ ಸೇವೆ ನೋಡಿ ಟೆಕ್ ಮಹೀಂದ್ರ ಸಂಸ್ಥೆ ಶಿಶುಮಂದಿರ ಜೊತೆಗೂಡಿ ಕಳೆದ 6 ತಿಂಗಳಿಂದ 2,500 ರೇಷನ್ ಕಿಟ್ಗಳನ್ನ ನೀಡಿದೆ. ಈಗ ಮತ್ತೆ ಎರಡನೇ ಅಲೆ ಆರಂಭವಾದರಿಂದ ಟೆಕ್ ಮಹೀಂದ್ರ ಸಂಸ್ಥೆ, ಶಿಶುಮಂದಿರ ಜೊತೆಗೆ ಸೇರಿ ಹತ್ತು ಹಳ್ಳಿಗಳಿಂದ ಸುಮಾರು 500 ಕುಟುಂಬಕ್ಕೆ ಇವತ್ತು ಅಕ್ಕಿ, ಗೋಧಿ, ಧಾನ್ಯ, ಎಣ್ಣೆಯನ್ನು ನೀಡಿತು. ಸೇವಾಮನೋಭಾವದಲ್ಲಿ ಪಡೆದ ಆಹಾರ ಪದಾರ್ಥಗಳನ್ನು ಶಿಶುಮಂದಿರ ಸಂಸ್ಥೆ ಬಡವರನ್ನು ಸರ್ವೇ ಮಾಡಿ ಅರ್ಹ ಫಲಾನುಭವಿಗಳಿಗೆ ಇಂದು ವಿತರಿಸಿತು.
10 ಕೆ.ಜಿ ಅಕ್ಕಿ, 5 ಕೆ.ಜಿ ಗೋಧಿ ಹಿಟ್ಟು, 2 ಕೆ.ಜಿ ತೊಗರಿಬೇಳೆ, 1 ಲೀಟರ್ ಅಡುಗೆ ಎಣ್ಣೆ ಹೊಂದಿದ 500 ಕಿಟ್ಗಳನ್ನು ವಿತರಿಸಲಾಯಿತು. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಸರತಿ ಸಾಲಿನಲ್ಲಿ, ಸಾಮಾಜಿಕ ಅಂತರದಲ್ಲಿ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಇದೇ ವೇಳೆ ಮಾತನಾಡಿದ ಶಿಶುಮಂದಿರ ಸದಸ್ಯ ರಾಜಕುಮಾರ್, ಸೇವಾ ಮನೋಭಾವದಿಂದ ಪಡೆದ ಫುಡ್ ಕಿಟ್ಗಳನ್ನು ಶಿಶುಮಂದಿರ ವಿತರಿಸುವ ಕೆಲಸ ಮಾಡುತ್ತಿದೆ. ಶಿಶುಮಂದಿರದ ಕಾರ್ಯದರ್ಶಿ ಆನಂದ್ ಅವರ ಮಾರ್ಗದರ್ಶನದಲ್ಲಿ ಕಳೆದ ಒಂದು ವರ್ಷದಿಂದ ಇದುವರೆಗೂ 15,000 ಫುಡ್ ಕಿಟ್ಗಳನ್ನು ವಿತರಿಸಲಾಗಿದೆ ಎಂದರು.
ಕೊರೊನಾ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು ಸಾವಿರಾರು ಅಂಗವಿಕಲರು, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಬಡಜನರಿಗೆ ಟೆಕ್ ಮಹೀಂದ್ರ ಫೌಂಡೇಶನ್ ವತಿಯಿಂದ ಇವತ್ತು ಸುಮಾರು 500 ಕೂಲಿ ಕಾರ್ಮಿಕ ಕುಟುಂಬದವರಿಗೆ ವಿತರಿಸಲಾಗುತ್ತಿದೆ ಎಂದರು.
ಬೇರೆ ರಾಜ್ಯದ ವಲಸೆ ಕಾರ್ಮಿಕರು ದಯವಿಟ್ಟು ವಾಪಸ್ ಊರುಗಳಿಗೆ ಹೋಗಬೇಡಿ ನಿಮ್ಮ ನೆರವಿಗೆ ಶಿಶು ಮಂದಿರ ಮತ್ತು ಟೆಕ್ ಮಹೀಂದ್ರ ಸಂಸ್ಥೆ ಇದೆ. ಪ್ರತೀ ತಿಂಗಳಿಗೆ ನಿಮ್ಮ ಕುಟುಂಬಕ್ಕೆ ರೇಷನ್ ನೀಡುವುದಾಗಿ ಮನವಿ ಮಾಡಿದರು.
ವೈದ್ಯರ ನೆರವು ಪಡೆದು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಉಚಿತ ಚಿಕಿತ್ಸೆ ಮತ್ತು ಆಕ್ಸಿಜನ್ ವ್ಯವಸ್ಥೆಯನ್ನೂ ಸಹ ಮಾಡುತ್ತಿದ್ದಾರೆ. ಪ್ರತೀದಿನ ನೂರು ಜನಕ್ಕೆ ಅಡುಗೆ ತಯಾರಿಸಿ ನಿರ್ಗತಿಕರಿಗೆ ಮತ್ತು ಆಸ್ಪತ್ರೆ ಬಳಿ ರೋಗಿಗಳನ್ನ ನೋಡಿಕೊಳ್ಳುತ್ತಿರುವ ಜನರಿಗೆ ಮಧ್ಯಾಹ್ನ ಊಟವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.